ಬೆಂಗಳೂರ: ಡಿ ಜೆ ಹಳ್ಳಿ ಮತ್ತು ಕೆ ಜಿ ಹಳ್ಳಿ ಗಲಭೆ ಪ್ರಕರಣದ ತನಿಖೆ ಒಂದೆಡೆ ಬಿರುಸಿನಿಂದ ಸಾಗುತ್ತಿದ್ರೆ, ಮತ್ತೊಂದೆಡೆ ಬಂಧಿತರ ಸಂಖ್ಯೆ ಹಾಗೂ ಎಫ್ಐಆರ್ಗಳ ಸಂಖ್ಯೆ ಕೂಡ ಏರುತ್ತಿದೆ. ಹೀಗಾಗಿ ಸದ್ಯ ಪ್ರಕರಣದ ತನಿಖೆಯನ್ನ ವಿಂಗಡಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಆದೇಶ ಹೊರಡಿಸಿದ್ದಾರೆ.
ಪ್ರಕರಣದ ತನಿಖೆಯನ್ನ ಸಿಸಿಬಿ ಹಾಗೂ ಎಸಿಬಿ ನಡೆಸುತ್ತಿದ್ದು, ಸದ್ಯ ಪ್ರಕರಣದಲ್ಲಿ ಮೂರು ಪ್ರಮುಖ ಪ್ರಕರಣಗಳನ್ನ ಸಿಸಿಬಿಗೆ ನೀಡಲಾಗಿದೆ. ಉಳಿದ 70ಕ್ಕೂ ಹೆಚ್ಚು ಪ್ರಕರಣಗಳು ಪೂರ್ವ ವಿಭಾಗದ ಪೊಲೀಸರಿಗೆ ಹಂಚಿಕೆಯಾಗಿವೆ.
ನಾಳೆಯಿಂದ ಅಧಿಕೃತವಾಗಿ 3 ಕೇಸ್ ತನಿಖೆ...
ಸಿಸಿಬಿ ಅಧಿಕಾರಿಗಳು ಸದ್ಯ ಪ್ರಕರಣವನ್ನು ಬಹಳ ಗಂಭೀರತೆಯಿಂದ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಟೆರರ್ ಲಿಂಕ್ ಇರುವ ಕಾರಣ ಸಿಸಿಬಿಯ ಉಗ್ರ ನಿಗ್ರಹ ಪಡೆ ಕೂಡ ಬಂಧಿತ ಆರೋಪಿಗಳ ವಿಚಾರಣೆಯನ್ನ ನಡೆಸುತ್ತಿದೆ. ಹೀಗಾಗಿ ಡಿ ಜೆ ಹಳ್ಳಿ ಇನ್ಸ್ಪೆಕ್ಟರ್ ಕೇಶವಮೂರ್ತಿ, ಕೆ ಜಿ ಹಳ್ಳಿ ಠಾಣೆ ಇನ್ಸ್ಪೆಕ್ಟರ್ ಅಜಯ್ ಸಾರಥಿ ಮತ್ತು ಅಖಂಡ ಶ್ರೀನಿವಾಸ್ ಕೊಟ್ಟ ದೂರುಗಳನ್ನು ಸಿಸಿಬಿ ಅಧಿಕಾರಿಗಳು ನಡೆಸಲಿದ್ದಾರೆ. ಹಾಗೆ ಇನ್ನುಳಿದ ಎಫ್ಐಆರ್ಗಳನ್ನ ಪೂರ್ವ ವಿಭಾಗದ ಪೊಲೀಸರಿಗೆ ನೀಡಲಾಗಿದೆ.
ಎಫ್ಐಆರ್ಗಳನ್ನ ಪ್ರತ್ಯೇಕವಾಗಿ ಇನ್ಸ್ಪೆಕ್ಟರ್ಗಳು ತನಿಖೆ ನಡೆಸಬೇಕಾಗುತ್ತದೆ. ಸಬ್ ಇನ್ಸ್ಪೆಕ್ಟರ್ ತನಿಖೆಯ ಮಾನಿಟರ್ ಮಾಡಿದ್ರೆ, ಇನ್ಸ್ಪೆಕ್ಟರ್ ಐಓಗಳಾಗಿರುತ್ತಾರೆ. ತಡರಾತ್ರಿ ಗಲಭೆ ಸೃಷ್ಟಿಸಿದ 8 ಜನರನ್ನ ಡಿ.ಜೆ ಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅರೋಪಿಗಳು ಕೋಲಾರ ಜಿಲ್ಲೆಯ ಬಳಿ ತಲೆಮರೆಸಿಕೊಂಡಿದ್ದರು. ಖಚಿತ ಮಾಹಿತಿ ಆಧಾರದ ಮೇಲೆ ದಾಳಿ ಮಾಡಿ ಬಂಧಿಸಲಾಗಿದೆ. ಸದ್ಯ ಆರೋಪಿಗಳನ್ನ ಮೆಡಿಕಲ್ ಟೆಸ್ಟ್ಗೆ ಒಳಪಡಿಸಿ ಮತ್ತೆ ಕಸ್ಟಡಿಗೆ ತೆಗೆದುಕೊಳ್ಳಲಿದ್ದಾರೆ.