ಕರ್ನಾಟಕ

karnataka

ETV Bharat / state

ಅಡ್ವೋಕೇಟ್​ ಜನರಲ್​​ ನೇತೃತ್ವದಲ್ಲಿ ಸಭೆ: ಶೀಘ್ರದಲ್ಲೇ ವಕೀಲರ ಸಂಚಾರಕ್ಕೆ ಸಿಗಲಿದೆ ಪಾಸ್​​‌ - ನಗರದ ಜಂಟಿ ಪೊಲೀಸ್‌ ಆಯುಕ್ತ ರವಿಕಾಂತೇಗೌಡ

ರಾಜ್ಯ ಅಡ್ವೋಕೇಟ್ ಜನರಲ್(ಎಜಿ) ಪ್ರಭುಲಿಂಗ ಕೆ. ನಾವದಗಿ ಅವರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಹಾಗೂ ನಗರದ ಜಂಟಿ ಪೊಲೀಸ್‌ ಆಯುಕ್ತ (ಸಂಚಾರ ವಿಭಾಗ) ರವಿಕಾಂತೇಗೌಡ ಅವರೊಂದಿಗೆ ಗುರುವಾರ ಸಭೆ ನಡೆಸಿದರು. ಈ ಸಭೆಯಲ್ಲಿ ಶೀಘ್ರವೇ ವಕೀಲರಿಗೆ ಪಾಸ್‌ ನೀಡುವ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲಾಗಿದೆ.

ವಕೀಲರ ಸಂಚಾರಕ್ಕೆ ಸಿಗಲಿದೆ ಪಾಸ್‌
ವಕೀಲರ ಸಂಚಾರಕ್ಕೆ ಸಿಗಲಿದೆ ಪಾಸ್‌

By

Published : Apr 30, 2020, 9:46 PM IST

ಬೆಂಗಳೂರು: ಲಾಕ್‌ಡೌನ್‌ ಸಂದರ್ಭದಲ್ಲಿ ವಕೀಲರು ಮನೆಯಿಂದ ಕಚೇರಿಗೆ ಓಡಾಡಲು ಅನುಮತಿ ನೀಡುವಂತೆ ಬೆಂಗಳೂರು ವಕೀಲರ ಸಂಘ ಒತ್ತಾಯಿಸಿದ ಹಿನ್ನೆಲೆಯಲ್ಲಿ ರಾಜ್ಯ ಅಡ್ವೋಕೇಟ್ ಜನರಲ್(ಎಜಿ) ಪ್ರಭುಲಿಂಗ ಕೆ. ನಾವದಗಿ ಅವರು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಹಾಗೂ ನಗರದ ಜಂಟಿ ಪೊಲೀಸ್‌ ಆಯುಕ್ತ (ಸಂಚಾರ ವಿಭಾಗ) ರವಿಕಾಂತೇಗೌಡ ಅವರೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆಸಿದ ಬಳಿಕ ಶೀಘ್ರವೇ ವಕೀಲರಿಗೆ ಪಾಸ್‌ ನೀಡುವ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ ಎನ್ನಲಾಗಿದೆ. ಕೊರೊನಾ ವೈರಸ್‌ ನಿಯಂತ್ರಿಸಲು ಸರ್ಕಾರ ಲಾಕ್‌ಡೌನ್ ಜಾರಿ ಮಾಡಿದ ಬಳಿಕ ವಕೀಲರು ಕಚೇರಿಗೂ ತೆರಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌, ವಕೀಲರಿಗೆ ಮನೆಯಿಂದ ಕಚೇರಿಗೆ ಓಡಾಡಲು ಪಾಸ್ ನೀಡುವಂತೆ ಕೋರಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮತ್ತು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಲಿಖಿತ ಮನವಿ ಸಲ್ಲಿಸಿದ್ದರು.

ಈ ಕುರಿತು ಸಭೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರು ರಾಜ್ಯ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರಿಗೆ ಸೂಚಿಸಿದ್ದರು. ಅದರಂತೆ ಎಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ತಮ್ಮ ಬೇಡಿಕೆ ಮುಂದಿಟ್ಟು, ಲಾಕ್​ಡೌನ್ ಇರುವ ಹಿನ್ನೆಲೆಯಲ್ಲಿ ತುರ್ತು ಅರ್ಜಿಗಳನ್ನು ಇ-ಫೈಲಿಂಗ್ ಮೂಲಕ ಕೋರ್ಟ್​ಗೆ ದಾಖಲಿಸಬೇಕಿದೆ. ಅರ್ಜಿಗಳನ್ನು ಸಿದ್ಧಪಡಿಸಬೇಕಾದರೆ ವಕೀಲರು ತಮ್ಮ ಕಚೇರಿಗಳಿಗೆ ತೆರಳಬೇಕಾಗುತ್ತದೆ. ಇನ್ನು ಸಬ್ ರಿಜಿಸ್ಟ್ರಾರ್ ಕಚೇರಿಗಳು ಸಹ ತೆರೆದಿದ್ದು, ಅಲ್ಲಿಗೂ ವಕೀಲರು ಭೇಟಿ ನೀಡಬೇಕಾಗುತ್ತದೆ. ವಕೀಲರ ಕೆಲಸಕ್ಕೆ ಅನುಕೂಲವಾಗುವಂತೆ ಬೆಂಗಳೂರು ವಕೀಲರ ಸಂಘ ಮತ್ತು ಕರ್ನಾಟಕ ವಕೀಲರ ಪರಿಷತ್ ನೀಡಿರುವ ಗುರುತಿನ ಚೀಟಿಗಳನ್ನು ಪರಿಗಣಿಸಿ ಕಚೇರಿ ಹಾಗೂ ಕೋರ್ಟ್​ಗಳಿಗೆ ಸಂಚರಿಸಲು ವಕೀಲರಿಗೆ ಅನುಮತಿ ನೀಡಬೇಕು. ಈ ಸಂಬಂಧ ಎಲ್ಲಾ ಪೊಲೀಸರಿಗೆ ಸೂಚನೆ ನೀಡಬೇಕು ಎಂದು ಕೋರಿದ್ದಾರೆ.

ಇದೇ ವೇಳೆ ರಾಜ್ಯ ಅಡ್ವೋಕೇಟ್ ಜನರಲ್ ಕೂಡ ವಕೀಲರು ತಮ್ಮ ಕಚೇರಿಗೆ ತೆರಳಲು ಪಾಸ್ ನೀಡುವ ಕುರಿತು ಶೀಘ್ರ ತೀರ್ಮಾನ ಕೈಗೊಳ್ಳುವಂತೆ ರವಿಕಾಂತೇಗೌಡರಿಗೆ ಸಲಹೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಬೆಂಗಳೂರು ನಗರ ಸಂಚಾರ ವಿಭಾಗದ ಮುಖ್ಯಸ್ಥರಾದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಪೊಲೀಸ್ ಪಾಸ್ ಪಡೆಯಲು ಅರ್ಜಿ ನಮೂನೆಯನ್ನು ಶೀಘ್ರದಲ್ಲೇ ವಕೀಲರ ಸಂಘಕ್ಕೆ ನೀಡತ್ತೇವೆ. ಸಂಘ ತನ್ನ ಸದಸ್ಯ ವಕೀಲರಿಗೆ ಅರ್ಜಿ ನಮೂನೆಯನ್ನು ಹಂಚಿಕೆ ಮಾಡಲಿ. ನಂತರ ವಕೀಲರು ಆ ನಮೂನೆಯನ್ನು ಭರ್ತಿ ಮಾಡಿ ಆನ್​ಲೈನ್​ ಮೂಲಕ‌ ಸಲ್ಲಿಸಿದರೆ ಪಾಸ್ ನೀಡಲಾಗುವುದು. ಈ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆಂದು ತಿಳಿಸಿದ್ದಾರೆ ಎನ್ನಲಾಗಿದೆ.

ABOUT THE AUTHOR

...view details