ಕರ್ನಾಟಕ

karnataka

ETV Bharat / state

ಅರಸು, ಸಿದ್ದರಾಮಯ್ಯ ಹೊರತುಪಡಿಸಿದ್ರೆ ಯಾರೂ ಪೂರ್ಣಾವಧಿ ಮುಖ್ಯಮಂತ್ರಿ ಆಗಲೇ ಇಲ್ಲ! - ಕರ್ನಾಟಕ ರಾಜಕೀಯ ಇತಿಹಾಸ

ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿ ಇದುವರೆಗೂ ಅಧಿಕಾರ ವಹಿಸಿಕೊಂಡವರಲ್ಲಿ ಎಸ್​. ನಿಜಲಿಂಗಪ್ಪ, ದೇವರಾಜ ಅರಸು ಹಾಗೂ ಸಿದ್ದರಾಮಯ್ಯ ಹೊರತುಪಡಿಸಿದರೆ ಯಾವ ಮುಖ್ಯಮಂತ್ರಿಯೂ ಪೂರ್ಣಾವಧಿ ಅಧಿಕಾರ ನಡೆಸಿಲ್ಲ. ಇದರ ಹಿಂದಿರುವ ರಾಜಕೀಯದ ಆಟ, ಮೇಲಾಟಗಳ ಕುರಿತ ಒಂದು ವರದಿ ಇಲ್ಲಿದೆ.

after Urs and siddaramaiah karnataka never seen Full-time CM
ಪೂರ್ಣಾವಧಿ ಮುಖ್ಯಮಂತ್ರಿ ಯಾರೂ ಆಗಲೇ ಇಲ್ಲ

By

Published : Jul 27, 2021, 7:05 PM IST

ಬೆಂಗಳೂರು:ಒಂದೆಡೆ ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ಅವರನ್ನ ಬಲವಂತವಾಗಿ ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿದೆ ಎಂಬ ವಿಚಾರದ ಚರ್ಚೆ ನಡೆದಿದ್ದರೆ ಇನ್ನೊಂದೆಡೆ ಇತಿಹಾಸದ ಪುಟ ತೆರೆದಾಗ ರಾಜ್ಯದಲ್ಲಿ ಪೂರ್ಣಾವಧಿ ಅಧಿಕಾರ ವಹಿಸಿದ ಮುಖ್ಯಮಂತ್ರಿಗಳ ಸಂಖ್ಯೆ ಬೆರಳೆಣಿಕೆಯಷ್ಟಿದೆ ಎಂಬುದು ಮತ್ತೊಂದು ಗಮನಾರ್ಹ ಸಂಗತಿ.

ರಾಜ್ಯದಲ್ಲಿ ಮುಖ್ಯಮಂತ್ರಿಗಳಾಗಿ ಇದುವರೆಗೂ ಅಧಿಕಾರ ವಹಿಸಿಕೊಂಡವರಲ್ಲಿ ಎಸ್​. ನಿಜಲಿಂಗಪ್ಪ, ದೇವರಾಜ ಅರಸು ಹಾಗೂ ಸಿದ್ದರಾಮಯ್ಯ ಹೊರತುಪಡಿಸಿದರೆ ಯಾವ ಮುಖ್ಯಮಂತ್ರಿಯೂ ಪೂರ್ಣಾವಧಿ ಅಧಿಕಾರ ನಡೆಸಿಲ್ಲ. ಈ ಮಧ್ಯೆ ಎಸ್ ಎಂ ಕೃಷ್ಣ ತಮ್ಮ ಅಧಿಕಾರಾವಧಿ ಮುಗಿಸುವ ಅವಕಾಶ ಇದ್ದರೂ ಸಹ ಆರು ತಿಂಗಳು ಮುನ್ನವೇ ಚುನಾವಣೆಗೆ ತೆರಳಿ ಪಕ್ಷವನ್ನು ಅಧಿಕಾರಕ್ಕೆ ತರಲಾಗಿದೆ. ತಾವು ಸಹ ಅಪೂರ್ಣ ಅವಧಿಯ ಸಿಎಂ ಎಂದು ಕರೆಸಿಕೊಂಡಿದ್ದಾರೆ.

ಅಧಿಕಾರ ಕಳೆದುಕೊಂಡವರಲ್ಲಿ ಅತ್ಯಂತ ಪ್ರಮುಖವಾಗಿ ಕೇಳಿ ಬರುವ ಮೊದಲ ಹೆಸರು ವೀರೇಂದ್ರ ಪಾಟೀಲ್ ಅವರದ್ದು. ಶಾಸಕರಾಗಿದ್ದ ಇವರು, 1989ರಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ ಸಂದರ್ಭ ಅವರನ್ನು ಬಲವಂತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತು. ಇದಾದ ಬಳಿಕ ಅಧಿಕಾರ ವಹಿಸಿಕೊಂಡ ಎಸ್. ಬಂಗಾರಪ್ಪ ಅವರನ್ನು ಸಹ ಎರಡು ವರ್ಷದ ಅಧಿಕಾರಾವಧಿ ನಂತರ ಭ್ರಷ್ಟಾಚಾರದ ಆರೋಪ ಹೊರಿಸಿ ಸ್ಥಾನದಿಂದ ಕೆಳಗಿಳಿಸಲಾಯಿತು. ಆದರೆ ಇದಾದ ಬಳಿಕ ಅಧಿಕಾರಕ್ಕೆ ಬಂದ ಡಾ. ಎಂ ವೀರಪ್ಪ ಮೊಯ್ಲಿ ಎರಡು ವರ್ಷ ಅಧಿಕಾರ ಅವಧಿ ಪೂರೈಸುತ್ತಿದ್ದಾಗ ಚುನಾವಣೆ ಬಂತು.

ಕಾಂಗ್ರೆಸ್​ಗೆ ಬಹುಮತ ಸಿಗದ ಹಿನ್ನೆಲೆ ಅವರು ಮತ್ತೆ ಅಧಿಕಾರಕ್ಕೆ ಬರಲಿಲ್ಲ. ಜನತಾ ಪರಿವಾರಕ್ಕೆ ಜನಬೆಂಬಲ ಸಿಕ್ಕ ಹಿನ್ನೆಲೆ ಎಚ್ ಡಿ ದೇವೇಗೌಡ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಒಂದೂವರೆ ವರ್ಷ ಕಳೆಯುವ ಮುನ್ನವೇ ಪ್ರಧಾನಿಯಾಗುವ ಅವಕಾಶ ಒದಗಿಬಂದ ಹಿನ್ನೆಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆ.ಎಚ್. ಪಟೇಲ್ ಅವರಿಗೆ ತಮ್ಮ ಅಧಿಕಾರ ಹಸ್ತಾಂತರಿಸಿದರು.

ಮೂರುವರೆ ವರ್ಷ ಅಧಿಕಾರ ನಡೆಸಿದ ಜೆ.ಹೆಚ್​. ಪಟೇಲ್ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆ ಮತ್ತೆ ಸಿಎಂ ಆಗಲಿಲ್ಲ. 1999 ರಲ್ಲಿ ಎಸ್ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತು. ಪೂರ್ಣಾವಧಿ ಅಧಿಕಾರ ವಹಿಸುವ ಅವಕಾಶವಿದ್ದರೂ ಆರು ತಿಂಗಳು ಮುನ್ನವೇ ಎಸ್​ಎಂಕೆ ಚುನಾವಣೆಗೆ ತೆರಳಲು ಮುಂದಾದರು.

ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಉಂಟಾದ ಸಂದರ್ಭ 2004ರಲ್ಲಿ ಜೆಡಿಎಸ್ ಜೊತೆ ಕೈಜೋಡಿಸಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂತು. ಧರ್ಮಸಿಂಗ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಒಂದೂವರೆ ವರ್ಷ ರಾಜ್ಯವನ್ನು ಮುನ್ನಡೆಸಿದರು.

ಜೆಡಿಎಸ್ ಬೆಂಬಲ ವಾಪಸ್ ಪಡೆದ ಹಿನ್ನೆಲೆ ಸರ್ಕಾರ ಮುರಿದುಬಿತ್ತು. ಇದಾದ ಬಳಿಕ 2006ರಲ್ಲಿ ಬಿಜೆಪಿ ಸಖ್ಯ ಬೆಳೆಸಿದ ಜೆಡಿಎಸ್ ಸರ್ಕಾರ ರಚಿಸಿ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಬಿಜೆಪಿ ಜೊತೆಗೆ ಒಪ್ಪಂದದ ಪ್ರಕಾರ 20 ತಿಂಗಳು ಮುಖ್ಯಮಂತ್ರಿಯಾಗಿ ಅಧಿಕಾರ ಬಿಟ್ಟುಕೊಟ್ಟ ಅವರು ಸಹ ಪೂರ್ಣಾವಧಿ ಪೂರೈಸಲಿಲ್ಲ. ಒಪ್ಪಂದದಂತೆ ಬಿಜೆಪಿ ಪರವಾಗಿ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 7 ದಿನಗಳಲ್ಲಿ ಜೆಡಿಎಸ್ ತನ್ನ ಬೆಂಬಲ ವಾಪಸ್ ಪಡೆಯಿತು.

ಇದಾದ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪೂರ್ಣ ಬಹುಮತ ಸಿಗದಿದ್ದರೂ ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ್ರು. ಆದರೆ 2011ರಲ್ಲಿ ಇವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆ ಸಿಎಂ ಸ್ಥಾನವನ್ನು ತ್ಯಜಿಸಿದರು. ನಂತರ ತಮ್ಮ ಆಪ್ತರಾದ ಡಿ ವಿ ಸದಾನಂದಗೌಡರು ಸಿಎಂ ಆಗಿ ಆಯ್ಕೆ ಮಾಡಿಸಿದರು. ಆದರೆ ವರ್ಷ ಪೂರೈಸುವ ಮುನ್ನವೇ ಅವರು ಸಹ ರಾಜೀನಾಮೆ ನೀಡಿ ಒಂದು ಅವಧಿಯಲ್ಲಿ ಬಿಜೆಪಿಯ ಮೂರನೇ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಸಿಎಂ ಗದ್ದುಗೆ ಏರಿದರು. ಅವರು ಸಹ ವರ್ಷ ಪೂರ್ಣಗೊಳಿಸುವ ಮುನ್ನವೇ ವಿಧಾನಸಭೆ ಚುನಾವಣೆ ಘೋಷಣೆಯಾಗಿ 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು.

ಮುಖ್ಯಮಂತ್ರಿಯಾಗಿ ನಿಯೋಜಿತರಾದ ಸಿದ್ದರಾಮಯ್ಯ ತಮ್ಮ ಐದು ವರ್ಷದ ಅವಧಿಯನ್ನು ಯಶಸ್ವಿಯಾಗಿ ಪೂರೈಸಿದರು. 2018ರಲ್ಲಿ ಯಾವುದೇ ಸರ್ಕಾರಕ್ಕೆ ಬಹುಮತ ಸಿಗದೇ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಸಂದರ್ಭ ಮತ್ತೊಮ್ಮೆ ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಆದರೆ ಬಹುಮತ ಸಿಗದ ಹಿನ್ನೆಲೆ 6ನೇ ದಿನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಅಧಿಕಾರ ವಹಿಸಿಕೊಂಡರು. ಆದರೆ ಮೈತ್ರಿ ಮುರಿದು ಬಿದ್ದ ಹಿನ್ನೆಲೆ ಒಂದು ವರ್ಷಕ್ಕೆ ಇವರು ಅಧಿಕಾರದಿಂದ ಕೆಳಗಿಳಿಯಬೇಕಾಯಿತು.

ಇದಾದ ಬಳಿಕ ಭರ್ಜರಿ ಆಪರೇಷನ್ ಕಮಲ ನಡೆದು 17 ಶಾಸಕರನ್ನ ಸೆಳೆದುಕೊಂಡು 2019ರಲ್ಲಿ ಮುಖ್ಯಮಂತ್ರಿಯಾದ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. ಆದರೆ ಅವಧಿ ಪೂರ್ಣಗೊಳಿಸುವ ಮುನ್ನವೇ ಜುಲೈ 26, 2021ರಂದು(ಸೋಮವಾರ) ರಾಜೀನಾಮೆ ನೀಡಿದ್ದಾರೆ.

ಬಿಜೆಪಿ ನೂತನ ಸಿಎಂ ಆಯ್ಕೆಯ ಅಂತಿಮ ಕಸರತ್ತು ನಡೆಸಿದ್ದು, ಯಾರೇ ಸಿಎಂ ಆದರೂ ಮುಂದಿನ ಒಂದು ವರ್ಷದ ಹತ್ತು ತಿಂಗಳ ಮಟ್ಟಿಗೆ ಮಾತ್ರ ಅಧಿಕಾರ ನಡೆಸಲಿದ್ದಾರೆ.

ABOUT THE AUTHOR

...view details