ಬೆಂಗಳೂರು: ನಗರದಲ್ಲಿ ಅನ್ಲಾಕ್ 2.0 ಜಾರಿಯಾಗಿದ್ದು, ಜನರು ಕೋವಿಡ್ ಇರುವುದನ್ನೂ ಮರೆತು ಬಿಂದಾಸ್ ಓಡಾಟ ನಡೆಸುತ್ತಿದ್ದಾರೆ. ಮಾಸ್ಕ್ ಸರಿಯಾಗಿ ಧರಿಸದೇ, ಗುಂಪು ಗುಂಪಾಗಿ ಹೊರಬಂದು ಕೋವಿಡ್ ಮತ್ತೆ ಹರಡುವ ಭೀತಿ ಹೆಚ್ಚಿಸುತ್ತಿದ್ದಾರೆ. ನಗರದ ಪ್ರಮುಖ ವ್ಯಾಪಾರಿ ಪ್ರದೇಶಗಳಾದ ಚಿಕ್ಕಪೇಟೆ, ಎಸ್ ಪಿ ರಸ್ತೆ, ನಗರಥ್ಪೇಟೆ, ಕಾಟನ್ ಪೇಟೆ, ಅವೆನ್ಯೂ ರಸ್ತೆಗಳಲ್ಲಿ ಜನಸಂದಣಿ ಕಂಡು ಬಂದಿದೆ.
ಕೆ.ಆರ್ ಮಾರುಕಟ್ಟೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಮಲ್ಲೇಶ್ವರಂನಲ್ಲೂ ಮತ್ತೆ ವ್ಯಾಪಾರ ಚಟುವಟಿಕೆಗಳು ಗರಿಗೆದರಿವೆ. ಕಳೆದ 50 ದಿನಗಳಿಗೂ ಹೆಚ್ಚು ಕಾಲ ಬಂದ್ ಆಗಿದ್ದ ಎಲೆಕ್ಟ್ರಾನಿಕ್ ವಸ್ತುಗಳು, ಪಾತ್ರೆ, ಬಟ್ಟೆ, ಚಪ್ಪಲಿ, ಗೃಹೋಪಯೋಗಿ ಅಂಗಡಿಗಳು, ಉದ್ಯಮಗಳ ಅಂಗಡಿಗಳು ಮತ್ತೆ ಜನರಿಂದ ಕಿಕ್ಕಿರಿದು ತುಂಬಿವೆ.
ಸಂಜೆ ಐದು ಗಂಟೆಗೆ ವ್ಯಾಪಾರ- ವಹಿವಾಟು ಬಂದ್ ಮಾಡಬೇಕು ಎಂಬ ಆದೇಶವಿದ್ದರೂ ಪೊಲೀಸರು ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಿದಾಗಷ್ಟೇ ಅಂಗಡಿ ಮಾಲೀಕರು ಎಚ್ಚೆತ್ತುಕೊಳ್ಳುತ್ತಿದ್ದಾರೆ.
ಹೋಟೆಲ್ಗಳಲ್ಲಿ ಶೇ. 50ರಷ್ಟು ಮಾತ್ರ ಜನರಿಗೆ ಕುಳಿತು ತಿನ್ನಲು ಅವಕಾಶ ಕೊಡಬೇಕೆಂಬ ನಿಯಮವಿದ್ದರೂ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಜೊತೆಗೆ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಾರೆ.