ಬೆಂಗಳೂರು: ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೋಂ ಕ್ವಾರಂಟೈನ್ ಆಗಿದ್ದ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಸುದೀರ್ಘ 26 ದಿನಗಳ ವಿರಾಮದ ನಂತರ ಸಮಾರಂಭವೊಂದರಲ್ಲಿ ಭಾಗಿಯಾದರು.
ಸುತ್ತೂರು ಮಠದ ಸಮಾರಂಭದಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ಮೈಸೂರಿನ ಸುತ್ತೂರು ಮಠದಲ್ಲಿ ಇಂದು ಜಗದ್ಗುರುಗಳಾದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳವರ 105ನೇ ಜಯಂತಿ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಬೆಂಗಳೂರಿನಿಂದಲೇ ಆನ್ಲೈನ್ ಮೂಲಕ ಭಾಗವಹಿಸಿದ ಸಿದ್ದರಾಮಯ್ಯ, ಶ್ರೀಗಳ ಕುರಿತಾದ ಕೃತಿಯನ್ನು ಇದೇ ಸಂದರ್ಭ ಬಿಡುಗಡೆ ಮಾಡಿದರು.
ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಸಿದ್ದರಾಮಯ್ಯ ಸುದೀರ್ಘ ವಿಶ್ರಾಂತಿ ಪಡೆದಿದ್ದಾರೆ. ಬೆಂಗಳೂರಿನ ಶಿವಾನಂದ ವೃತ್ತ ಸಮೀಪವಿರುವ ಸರ್ಕಾರಿ ನಿವಾಸದಲ್ಲಿ ತಂಗಿರುವ ಅವರು, ಚಿಕಿತ್ಸೆ ಹಾಗೂ ವಿಶ್ರಾಂತಿ ಕಾರಣದಿಂದ ಕಳೆದ 26 ದಿನಗಳಿಂದ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇಂದು ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಸಾರ್ವಜನಿಕ ಸಮಾರಂಭವೊಂದರಲ್ಲಿ ವಿಶಿಷ್ಟವಾಗಿ ಪಾಲ್ಗೊಂಡರು.
ಆಗಸ್ಟ್ 3ರಂದು ಜ್ವರದಿಂದ ಬಳಲುತ್ತಿದ್ದ ಸಿದ್ದರಾಮಯ್ಯ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ತಪಾಸಣೆಗೆ ಒಳಪಡಿಸಿದ ಸಂದರ್ಭ ಆ. 4ರಂದು ಅವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. 12 ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದ ಸಿದ್ದರಾಮಯ್ಯ ನಂತರ ಅಲ್ಲಿಂದ ಇಲ್ಲಿಯವರೆಗೆ ಹೋಂ ಕ್ವಾರಂಟೈನ್ಗೊಳಗಾಗಿದ್ದರು.
ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಹಲವು ಸಭೆ ಸಮಾರಂಭಗಳಿಂದ ದೂರ ಉಳಿದಿದ್ದರು. ಪಕ್ಷದ ರೇಸ್ ಕೋರ್ಸ್ ರಸ್ತೆಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಕೂಡ ಭಾಗವಹಿಸಿರಲಿಲ್ಲ. ಶಿವಾನಂದ ವೃತ್ತದ ಕೂಗಳತೆಯಷ್ಟು ದೂರದಲ್ಲಿರುವ ಕಾಂಗ್ರೆಸ್ ಭವನದತ್ತ ಕೂಡ ಅವರು ಮುಖ ಹಾಕದೆ ದೂರ ಉಳಿದಿದ್ದರು. ಇದೀಗ ಆನ್ಲೈನ್ ಮೂಲಕ ಮೊದಲ ಬಾರಿಗೆ 26 ದಿನಗಳ ನಂತರ ಸಾರ್ವಜನಿಕ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದಾರೆ.