ಬೆಂಗಳೂರು:ಕೋವಿಡ್ ಮಹಾಮಾರಿಯ ಅಬ್ಬರವೇನೋ ಕಡಿಮೆಯಾಗಿದೆ. ಅಂದಹಾಗೆ ಇಷ್ಟು ದಿನ ಮರೆತೇ ಹೋಗಿದ್ದ ಉಳಿದ ವೈರಸ್ಗಳ ಬಗ್ಗೆ ಹೆಚ್ಚಿನ ಗಮನ ಹರಿಸುವ ಸಮಯ ಬಂದಿದೆ.
2020ರಲ್ಲಿ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಕೋವಿಡ್ ಮಹಾಮಾರಿ ಇದೀಗ ಸಾಕಷ್ಟು ತಣ್ಣಗಾಗಿದೆ. ಈ ಜಾಗತಿಕ ವೈರಸ್ ಮಹಾಮಾರಿಯ ದಾಳಿ ಸಂದರ್ಭ ವಿಶೇಷ ಗಮನಹರಿಸುವ ಸ್ಥಿತಿ ಎದುರಾದ ಹಿನ್ನೆಲೆ ಇತರ ವೈರಸ್ ಗಳಿಂದ ವ್ಯಾಪಿಸಬಹುದಾದ ರೋಗಗಳ ಬಗ್ಗೆ ಜನರ ಗಮನ ಕಡಿಮೆಯಾಗಿತ್ತು. ವೈದ್ಯಕೀಯ ಕ್ಷೇತ್ರ ಸಹ ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿರಲಿಲ್ಲ. ಆದರೆ ನಿಧಾನವಾಗಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ಮಹಾಮಾರಿಯ ಅಬ್ಬರವು ಕಡಿಮೆ ಆಗಿರುವ ಹಿನ್ನೆಲೆ ಶೇಕಡ 90ರಷ್ಟು ಮಂದಿ ಮಾಸ್ಕ್ ಧರಿಸುವುದನ್ನು ಬಿಟ್ಟಿದ್ದಾರೆ. ಕೊರೊನಾ ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸುತ್ತಿದ್ದ ಜನ ಇದೀಗ ಕೊಂಚ ನಿರಾಳರಾಗಿದ್ದು ಅದನ್ನು ಮರೆತಿದ್ದಾರೆ. ಮಾಸ್ಕ್ ಧರಿಸುತ್ತಿದ್ದ ಕಾರಣಕ್ಕೆ ಕೊರೊನಾ ಸೇರಿದಂತೆ ಹಲವು ವೈರಸ್ ಗಳು ಮೂಗು ಹಾಗೂ ಬಾಯಿಯ ಮೂಲಕ ಶರೀರವನ್ನು ಸೇರುತ್ತಿರಲಿಲ್ಲ.
ಭದ್ರತಾ ಕವಚದ ರೀತಿ ಮಾಸ್ಕ್ ಕಾರ್ಯನಿರ್ವಹಿಸುತ್ತಿದ್ದ ಹಿನ್ನೆಲೆ ಸಾಕಷ್ಟು ಜನ ಧೂಳು ಹೊಗೆ ಹಾಗೂ ಕಲುಷಿತ ಗಾಳಿಗೆ ತಮ್ಮನ್ನ ತಾವು ಓಡ್ಡಿಕೊಳ್ಳದೆ ಸುರಕ್ಷಿತವಾಗಿದ್ದರು. ಆದರೆ ಇದೀಗ ಮತ್ತೊಮ್ಮೆ ಸಣ್ಣಪುಟ್ಟ ವೈರಸ್ ಗಳ ಮೂಲಕ ಹರಡಬಹುದಾದ ರೋಗಭೀತಿ ಆರಂಭವಾಗಿದೆ.
ವೈರಸ್ ಪ್ರೇರಿತ ದಾಳಿ: ಕೋವಿಡ್ ಮಹಾಮಾರಿಯ ಬದಲು ಬೇರೆ ವೈರಸ್ ಗಳಿಂದ ಹರಡುವ ರೋಗಗಳ ಪ್ರಮಾಣ ನಗರ ಪ್ರದೇಶದಲ್ಲಿ ಹೆಚ್ಚಾಗಿದೆ. ವ್ಯಾಕ್ಸಿನೇಷನ್ ನೀಡಿಕೆಯಿಂದಾಗಿ ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಆದರೆ ಉಳಿದ ಸಮಸ್ಯೆಗಳು ಈಚೆಗೆ ಹೆಚ್ಚಾಗುತ್ತಿದೆ.