ಬೆಂಗಳೂರು: ಪಂಚ ಗ್ಯಾರಂಟಿಗಳು ಜಾರಿ ಗೊಳಿಸಿರುವ ಹಿನ್ನೆಲೆ ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ನಾಯಕರ ಕಾಲೆಳೆದಿದೆ. ಟ್ವೀಟ್ ಮೂಲಕ ನಳಿನ್ ಕುಮಾರ್ ಕಟೀಲ್ ಅವರೇ, ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ. ಬೊಮ್ಮಾಯಿ ಅವರೇ, ನಿಮ್ಮ ಮನೆಗೂ ಫ್ರೀ, ಶೋಭಾ ಕರಂದ್ಲಾಜೆ ಅವರೇ ನಿಮಗೂ ಪ್ರಯಾಣ ಫ್ರೀ ಎಂದು ವ್ಯಂಗ್ಯವಾಡಿದೆ. ಸಿ.ಟಿ.ರವಿ ಅವರೇ, ನಿಮ್ಮ ಮನೆಯವರಿಗೂ 2000 ಫ್ರೀ. ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ, (ಪದವಿ ಪಡೆದಿದ್ದವರಿದ್ರೆ ಮಾತ್ರ). ಇದು ನಮ್ಮ ಗ್ಯಾರಂಟಿ ಎಂದು ಕಿಚಾಯಿಸಿದೆ.
ಚುನಾವಣೆಗೆ ಮುನ್ನ ಘೋಷಣೆ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳ ಜಾರಿಗೊಳಿಸಿ ಸಂಪುಟ ಸಭೆಯಲ್ಲಿ ತೀರ್ಮಾನಗೊಳಿಸಲಾಗಿದೆ. ಕುಟುಂಬದ ಮಹಿಳೆಗೆ ಪ್ರತಿ ತಿಂಗಳು 2,000 ರೂ ನೀಡುವ ಗೃಹಲಕ್ಷ್ಮಿ ಯೋಜನೆ, ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪದವಿಧರರಿಗೆ 3,000 ರೂ ಹಾಗೂ ಡಿಪ್ಲೋಮಾ ಪದವೀಧರರಿಗೆ 1,500 ರೂ ನೀಡುವ ಯುವನಿಧಿ ಯೋಜನೆ, ರಾಜ್ಯದ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣದ ಶಕ್ತಿ ಯೋಜನೆ ಹಾಗೂ ಬಿಪಿಎಲ್ ಕಾರ್ಡ್ ದಾರರಿಗೆ 10 ಕೆ.ಜಿ. ಅನ್ನಭಾಗ್ಯ ಯೋಜನೆ ಜಾರಿ ಮಾಡಿ ತೀರ್ಮಾನಿಸಲಾಗಿದೆ.
ಕಾಂಗ್ರೆಸ್ ಗ್ಯಾರಂಟಿ ಟ್ವೀಟ್ಗೆ ಬಿಜೆಪಿ ಟಾಂಗ್:ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ಸಿ.ಟಿ ರವಿ ಹಾಗೂ ಬಜರಂಗ ದಳ ಹೆಸರು ಸೂಚಿಸಿ ನಿಮಗೆಲ್ಲರಿಗೂ ಗ್ಯಾರಂಟಿ ಸಿಗುತ್ತೆ ಎಂದು ಲೇವಡಿ ಮಾಡಿದ್ದ ಕಾಂಗ್ರೆಸ್ ಘಟಕಕ್ಕೆ ರಾಜ್ಯ ಬಿಜೆಪಿ ಘಟಕ ಟಾಂಗ್ ನೀಡಿದೆ. ನಮಗೆಲ್ಲಾ ಫ್ರೀ ಹಾಗೆಯೇ ನಿರುದ್ಯೋಗ ಭತ್ಯೆಯನ್ನು ರಾಹುಲ್ ಗಾಂಧಿ ಹಾಗೂ ಯತೀಂದ್ರ ಸಿದ್ದರಾಮಯ್ಯಗೂ ದಯಪಾಲಿಸಿ ಎಂದು ತಿರುಗೇಟು ನೀಡಿದೆ.