ಬೆಂಗಳೂರು : ವಿಶ್ವದ ಪ್ರತಿಷ್ಠಿತ ರಕ್ಷಣಾ ಪ್ರದರ್ಶನ ಕಾರ್ಯಕ್ರಮಗಳಲ್ಲಿ ಒಂದಾದ ಏರೋ ಇಂಡಿಯಾ ಯಲಹಂಕ ವಾಯು ನೆಲೆಯಲ್ಲಿ ಫೆ.3 ರಿಂದ 7 ರವರೆಗೆ ನಡೆಯಲಿದೆ. 14 ದೇಶ, 601 ಪ್ರದರ್ಶಕರು, 78 ವಿದೇಶಿ ಪ್ರದರ್ಶಕರು ಭಾಗವಹಿಸುವ, ದೇಶದ ಮೊದಲ ಹೈಬ್ರಿಡ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯ ಸಕಲ ಸಿದ್ದತೆ ಮಾಡಿಕೊಂಡಿದೆ.
ಮೊದಲ ಹೈಬ್ರಿಡ್ ಕಾರ್ಯಕ್ರಮ, ಎಲ್ಲರಿಗೂ ಕೋವಿಡ್ ಟೆಸ್ಟ್ ಕಡ್ಡಾಯ:ಯಲಹಂಕ ವಾಯುನೆಲೆಗೆ ಬರುವ ಎಲ್ಲರೂ ಕನಿಷ್ಠ 72 ಗಂಟೆ ಮುನ್ನ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟವಾಗಿ ಹೇಳಿದೆ.
ಕೋವಿಡ್ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಫೆ.3 ರಿಂದ 5 ರ ವರೆಗೆ ಮಾತ್ರ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಹಾಗೂ ದಿನಕ್ಕೆ ಕೇವಲ 3 ಸಾವಿರ ಮಂದಿಯ ಪ್ರವೇಶಕ್ಕೆ ಮಿತಿ ನಿಗದಿಪಡಿಸಲಾಗಿದೆ. ಏರ್ ಶೋಗೆ ಭೇಟಿ ನೀಡುವ ಸಾರ್ವಜನಿಕರು 500 ರೂ. ನೀಡಿ ಪಾಸ್ ಪಡೆಯಬೇಕು ಮತ್ತು 3 ಗಂಟೆ ಮಾತ್ರ ಕಾರ್ಯಕ್ರಮದ ಸ್ಥಳದಲ್ಲಿ ಇರಲು ಅವಕಾಶವಿದೆ. ಪಾಸ್ ಪಡೆದವರಿಗೆ ಅಕ್ರೋಬಾಟ್ ವೀಕ್ಷಣೆಗೆ ಮಾತ್ರ ಅವಕಾಶವಿದ್ದು, ಬೇರೆ ಯಾವ ಪ್ರದರ್ಶನ ಸ್ಥಳಕ್ಕೂ ಹೋಗುವ ಹಾಗಿಲ್ಲ. ಇನ್ನು, ವ್ಯಾವಹಾರಿಕ ಪಾಸ್ ಎರಡು ರೀತಿ ಇರಲಿದ್ದು, ಅರ್ಧ ದಿನದ ಪಾಸ್ಗೆ 2,500 ರೂ. ಹಾಗೂ ದಿನದ ಪಾಸ್ಗೆ 5 ಸಾವಿರ ರೂ. ಇರಲಿದೆ.
ಓದಿ : ಏರೋ ಇಂಡಿಯಾ-2021 ಹಿನ್ನೆಲೆ ಭಾಗಶಃ ಬಂದ್ ಆಗಲಿದೆ ಕೆಂಪೇಗೌಡ ವಿಮಾನ ನಿಲ್ದಾಣ
ಶಾರ್ಪ್ ಶೂಟರ್ಸ್, ಡ್ರೋನ್ ನಿಯಂತ್ರಣ ತಂತ್ರಜ್ಞಾನ :ರಕ್ಷಣಾ ಇಲಾಖೆಯ ಕಾರ್ಯಕ್ರಮದಲ್ಲಿ ಡ್ರೋನ್ ಹಾರಿಸುವಂತಿಲ್ಲ. ಈ ನಿಟ್ಟಿನಲ್ಲಿ ಡ್ರೋನ್ ನಿಯಂತ್ರಣ ತಂತ್ರಜ್ಞಾನ ಏರೋ ಇಂಡಿಯಾದಲ್ಲಿ ಇರಲಿದೆ. ಇದರ ಜೊತೆಗೆ ಶತ್ರುಗಳ ತಡೆಗೆ ವಾಯುಪಡೆ ಹದ್ದಿನ ಕಣ್ಣು ಇರಿಸಲಿದ್ದು, ಶಾರ್ಪ್ ಶೂಟರ್ಗಳನ್ನು ನಿಯೋಜನೆ ಮಾಡಿದೆ.