ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಫೆಬ್ರವರಿ 13 ರಿಂದ 5 ದಿನಗಳ ವರೆಗೂ ಏರೋ ಇಂಡಿಯಾ 2023 ನಡೆಯಲಿದೆ. ಕಾರ್ಯಕ್ರಮಕ್ಕೆ ಪ್ರಧಾನಿಗಳು ಸೇರಿದಂತೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವುದರಿಂದ ಕೆಂಪೇಗೌಡ ವಿಮಾನ ನಿಲ್ದಾಣದ ರಸ್ತೆಯಲ್ಲಿ ವಾಹನಗಳ ದಟ್ಟನೆ ಉಂಟಾಗಲಿದೆ. ಏರ್ ಶೋಗೆ ಬರುವ ಗಣ್ಯ ವ್ಯಕ್ತಿಗಳು, ತುರ್ತು ಸೇನಾ ವಾಹನಗಳು ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಾಹನಗಳ ಸುಗಮ ಸಂಚಾರಕ್ಕೆ ಬೆಂಗಳೂರು ನಗರ ಸಂಚಾರಿ ಪೊಲೀಸರು ತಾತ್ಕಾಲಿಕವಾಗಿ ಮಾರ್ಗಗಳ ಬದಲಾವಣೆ ಮಾಡಿದ್ದಾರೆ.
ನಾಲ್ಕು ಪ್ರಮುಖ ರಸ್ತೆಗಳಲ್ಲಿ ಮಾರ್ಗ ಬದಲಾವಣೆ ಮಾಹಿತಿ.. ಬೆಂಗಳೂರನ್ನು ಸಂಪರ್ಕಿಸುವ ನಾಲ್ಕು ಪ್ರಮುಖ ರಸ್ತೆಗಳಲ್ಲಿ ಮಾರ್ಗ ಬದಲಾಣೆ ಮಾಡಲಾಗಿದೆ. ಕೆಲವು ರಸ್ತೆಗಳಲ್ಲಿ ಸಂಚಾರ ನಿಷೇಧ ಮತ್ತು ಮಾರ್ಗ ಬದಲಾಣೆ ಮಾಡಲಾಗಿದೆ. ರಸ್ತೆ ಬದಿಗಳಲ್ಲಿ ವಾಹನಗಳ ನಿಲುಗಡೆ ಮತ್ತು ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಕೆಲವು ರಸ್ತೆಗಳಲ್ಲಿ ಲಾರಿ ಟ್ರಕ್, ಖಾಸಗಿ ಬಸ್, ಲಾರಿ, ಟ್ರ್ಯಾಕ್ಟರ್ ಸೇರಿದಂತೆ ಭಾರೀ ಮತ್ತು ಮಧ್ಯಮ ಸರಕು ಸಾಗಣೆ ವಾಹನಗಳಿಗೆ ನಿಷೇಧ ಮಾಡಿ ನಗರ ಸಂಚಾರಿ ಪೊಲೀಸರು ಆದೇಶಿಸಿದ್ದಾರೆ. ಫೆಬ್ರವರಿ 13ರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಕಾರ್ಯಕ್ರಮ ನಡೆಯುವ ದಿನದಂದು ನಿಯಮ ಜಾರಿಯಲ್ಲಿರುತ್ತದೆ.
1. ಹೈದರಾಬಾದ್ ಮತ್ತು ಚಿಕ್ಕಬಳ್ಳಾಪುರದಿಂದ ಬರುವ ಲಾರಿ, ಟ್ರಕ್, ಖಾಸಗಿ ಬಸ್ಗಳನ್ನು ದೇವನಹಳ್ಳಿ- ದಾಬಸ್ ಪೇಟೆ -ನೆಲಮಂಗಲ ಮೂಲಕ ಎನ್ಹೆಚ್ 4 ತಲುಪಲು ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ದೇವನಹಳ್ಳಿ - ಸೂಲಿಬೆಲೆ - ಹೊಸಕೋಟೆ ಮೂಲಕ ಕೆ. ಆರ್. ಪುರಂ, ಹೊಸೂರು ತಲುಪಲು ವ್ಯವಸ್ಥೆ ಮಾಡಲಾಗಿದೆ.