ಬೆಂಗಳೂರು: ಅ.21ರಂದು ಕಲಬುರಗಿ, ಯಾದಗಿರಿ ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿ ನೆರೆಹಾನಿ ವೀಕ್ಷಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಅ.21 ರಂದು ನೆರೆಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ: ಸಿಎಂ ಬಿಎಸ್ವೈ - ಬೆಂಗಳೂರು
ಅ. 21ರಂದು ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದೇನೆ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ರಾಜ್ಯದ ಉತ್ತರ ಕರ್ನಾಟಕದಲ್ಲಿ ಭಾರೀ ಪ್ರಮಾಣದ ಮಳೆಯಾಗಿದೆ. ಜೊತೆಗೆ ಮಹಾರಾಷ್ಟ್ರದ ಜಲಾಶಯಗಳಿಂದ ಹೆಚ್ಚುವರಿಯಾಗಿ ಅಪಾರ ಪ್ರಮಾಣದ ನೀರು ಭೀಮಾ ಮತ್ತು ಕೃಷ್ಣಾ ನದಿಗಳಿಗೆ ಹರಿದು ಬರುತ್ತಿದ್ದು, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಯ ಹಲವಾರು ಗ್ರಾಮಗಳು ಪೂರ್ತಿ ಮತ್ತು ಭಾಗಶಃ ಮುಳುಗಡೆಯಾಗಿವೆ. ಇದರ ಜತೆಗೆ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಸ್ಥಳೀಯ ಜಿಲ್ಲಾಡಳಿತದ ವತಿಯಿಂದ ತಕ್ಷಣ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ವಾಸ್ತವಿಕವಾದ ಪ್ರಮಾಣವನ್ನು ಅರಿಯಲು ವೈಮಾನಿಕ ಸಮೀಕ್ಷೆ ಮಾಡುವುದು ಅವಶ್ಯಕವಾಗಿದೆ. ಹಾಗಾಗಿ ಅ. 21ರಂದು ಕಲಬುರ್ಗಿ ಯಾದಗಿರಿ ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದೇನೆ ಎಂದು ಸಿಎಂ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ.