ಕರ್ನಾಟಕ

karnataka

ETV Bharat / state

ಪಿಎಸ್ಐ ಅಕ್ರಮ: ಕೆಲವರು ಮಾಡಿದ ತಪ್ಪಿಗೆ ಇಡೀ ಪರೀಕ್ಷೆ ರದ್ದು ಮಾಡುವ ಅಗತ್ಯವಿಲ್ಲ- ಪ್ರಾಮಾಣಿಕ ಅಭ್ಯರ್ಥಿಗಳ ಪರ ವಕೀಲರ ವಾದ - ಈಟಿವಿ ಭಾರತ ಕರ್ನಾಟಕ

ಪಿಎಸ್ಐ ನೇಮಕಾತಿ ಅಕ್ರಮದ ಆರೋಪಿಗಳನ್ನು ಹೊರತು ಪಡಿಸಿ, ಉಳಿದವರನ್ನು ಕರ್ನಾಟಕ ನಾಗರಿಕ ಸೇವೆಗಳ ಕಾಯ್ದೆಯನ್ನು ಅನ್ವಯಿಸುವ ಮೂಲಕ ರಕ್ಷಿಸಬೇಕಿದೆ ಎಂದು ಪಿಎಸ್​ಐ ಪ್ರಾಮಾಣಿಕ ಅಭ್ಯರ್ಥಿಗಳ ಪರ ವಕೀಲರು ಹೈಕೋರ್ಟ್​ನಲ್ಲಿ ವಾದ ಮಂಡಿಸಿದ್ದಾರೆ.

advocate-arguement-for-psi-honest-candidates-in-high-court
ಪಿಎಸ್ಐ ಅಕ್ರಮ: ಕೆಲವರು ಮಾಡಿದ ತಪ್ಪಿಗೆ ಇಡೀ ಪರೀಕ್ಷೆ ರದ್ದು ಮಾಡುವ ಅಗತ್ಯವಿಲ್ಲ- ಪ್ರಾಮಾಣಿಕ ಅಭ್ಯರ್ಥಿಗಳ ಪರ ವಕೀಲರ ವಾದ

By

Published : Jul 12, 2023, 9:57 PM IST

ಬೆಂಗಳೂರು: ಪೊಲೀಸ್ ಸಬ್ ಇನ್ಸ್​ಪೆಕ್ಟರ್​ (ಪಿಎಸ್ಐ) ನೇಮಕಾತಿ ಅಕ್ರಮದಲ್ಲಿ ಐವರು ತಪ್ಪು ಮಾಡಿದ್ದಾರೆ ಎಂಬ ಕಾರಣಕ್ಕೆ ಇಡೀ ಪರೀಕ್ಷೆ ರದ್ದು ಪಡಿಸುವುದು ನ್ಯಾಯ ಸಮ್ಮತವಲ್ಲ ಎಂದು ಅರ್ಜಿದಾರರ ಪರ ವಕೀಲರು ಹೈಕೋರ್ಟ್​ ಮುಂದೆ ತಮ್ಮ ವಾದ ಮಂಡಿಸಿದ್ದಾರೆ. 545 ಪಿಎಸ್ಐ ನೇಮಕ ಸಂಬಂಧ ಅಕ್ರಮ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಇಡೀ ಪರೀಕ್ಷೆ ರದ್ದು ಪಡಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಪ್ರಾಮಾಣಿಕ ಅಭ್ಯರ್ಥಿಗಳು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದ್ರ ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ನ್ಯಾಯಪೀಠಕ್ಕೆ ಅರ್ಜಿದಾರರ ಪರ ವಕೀಲರು ವಿವರಣೆ ನೀಡಿದೆ. ಅಲ್ಲದೇ 54,103 ಅಭ್ಯರ್ಥಿಗಳು ಪಿಎಸ್​ಐ ಪರೀಕ್ಷೆ ಬರೆದಿದ್ದರು. ಅದರಲ್ಲಿ ಐವರ ಓಎಂಆರ್ ಶೀಟ್ ತಿದ್ದುಪಡಿ ಮಾಡಲಾಗಿದೆ ಎಂದು ತಿಳಿದುಬಂದಿತ್ತು. ಕೇವಲ‌ ಒಂದು ಶಾಲೆಯಲ್ಲಿ ಅಕ್ರಮ ನಡೆದಿದೆ ಎಂದು ಹೇಳಲಾಯಿತು. ಅದನ್ನು ಆಧರಿಸಿ ಇಡೀ ಲಿಖಿತ ಪರೀಕ್ಷೆ ರದ್ದು ಪಡಿಸಿರುವುದು ನ್ಯಾಯ ಸಮ್ಮತವಲ್ಲ. ಲಿಖಿತ ಪರೀಕ್ಷೆಯನ್ನೇ ರದ್ದುಪಡಿಸಲು ಬೇಕಾದ ಅಗತ್ಯ ದಾಖಲೆಗಳು ಸರ್ಕಾರದ ಬಳಿ ಇಲ್ಲವೇ ಇಲ್ಲ ಎಂದು ವಿವರಿಸಿದರು.

ಲಿಖಿತ ಪರೀಕ್ಷೆ ರದ್ದುಪಡಿಸಿ 15 ತಿಂಗಳು ಕಳೆದರೂ ಸರ್ಕಾರದ‌ ಮುಂದೆ ದಾಖಲೆಗಳು ಇಲ್ಲವಾಗಿದೆ.‌ ಇನ್ನೆಷ್ಟು ದಿನ ಆಯ್ಕೆಯಾದ ಅಭ್ಯರ್ಥಿಗಳು ನರಳಬೇಕು?. ಕಳಂಕಿತ ಅಭ್ಯರ್ಥಿಗಳು ಹಾಗೂ ಕಳಂಕ ರಹಿತ ಅಭ್ಯರ್ಥಿಗಳು ಎಂದು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂಬ ಪ್ರಕರಣ ಇದೇನಲ್ಲ ಎಂದು ಕೋರ್ಟ್​ಗೆ ವಿವರಿಸಿದರು. ಮುಂದಿನ ವಿಚಾರಣೆಯನ್ನು ನ್ಯಾಯಪೀಠ ಗುರುವಾರಕ್ಕೆ ಮುಂದೂಡಿತು.

ವಾದದ ಪ್ರಮುಖ ಅಂಶಗಳು:2011ರಲ್ಲಿ ನಡೆದಿದ್ದ ನೇಮಕಾತಿಯಲ್ಲಿ ಅವ್ಯವಹಾರ ಕಂಡುಬಂದಿತ್ತು. ಆ ಕುರಿತು ಸಿಐಡಿ ತನಿಖೆ ನಡೆಸಿ ನೀಡಿದ್ದ ಮಧ್ಯಂತರ ವರದಿ ಆಧರಿಸಿಯೇ ರಾಜ್ಯ ಸರ್ಕಾರವು ಇಡೀ ಪ್ರಕ್ರಿಯೆಯನ್ನು 2013ರ ಅಕ್ಟೋಬರ್ 15ರಂದು ಹಿಂಪಡೆದಿತ್ತು. ಒಂದು ದಶಕದ ಬಳಿಕ 2022ರಲ್ಲಿ ಕರ್ನಾಟಕ ನಾಗರಿಕ ಸೇವೆಗಳ (2011ನೇ ಬ್ಯಾಚಿನ ಗೆಜೆಟೆಡ್ ಪ್ರೊಬೆಷನರ್ಸ್ ಆಯ್ಕೆ ಸಿಂಧುತ್ವ ಮತ್ತು ನೇಮಕಾತಿ) ಕಾಯ್ದೆ ಮೂಲಕ ಅವರ ಆಯ್ಕೆಗೆ ಅನುವು ಮಾಡಿಕೊಡಲಾಗಿದೆ. ಇದೇ ನಿಯಮವನ್ನು ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಪಾಲಿಸಬೇಕು ಎಂದರು.

ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲಿಷ್​​ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕರು ಮತ್ತು ಆಡಳಿತ ಸಿಬ್ಬಂದಿ, ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಸಹಕರಿಸಿದ್ದಾರೆ ಎಂದು ಹೇಳಲಾಗಿತ್ತು. ಸರ್ಕಾರ ಆದೇಶ ಹೊರಡಿಸುವ ವೇಳೆಗೆ ಕಳಂರಹಿತ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತ ತಲುಪಿತ್ತು. 171 ಮಂದಿ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ಮಾತ್ರ ನೇಮಕಾತಿ ಆದೇಶ ವಿತರಿಸಲು ಬಾಕಿ ಇತ್ತು ಎಂದು ತಿಳಿಸಿದರು.

ಈ ನಡುವೆ ವಿವೇಚನಾ ರಹಿತ, ಅಕ್ರಮ, ಅಸಂವಿಧಾನಿಕ ಮತ್ತು ಅತಾರ್ತಿಕವಾಗಿ ಲಿಖಿತ ಪರೀಕ್ಷೆಯನ್ನೇ ರದ್ದುಪಡಿಸಲು ಸರ್ಕಾರ ಆದೇಶಿಸಿದೆ. 15 ತಿಂಗಳು ಕಳೆದರೂ ಲಿಖಿತ ಪರೀಕ್ಷೆ ರದ್ದುಪಡಿಸಿರುವುದಕ್ಕೆ ಸಮರ್ಥವಾದ ಕಾರಣ ಹಾಗೂ ದಾಖಲೆಗಳು ರಾಜ್ಯ ಸರ್ಕಾರದ ಬಳಿ ಇಲ್ಲವೇ ಇಲ್ಲ. ಪಿಎಸ್‌ಐ ನೇಮಕಾತಿಯಲ್ಲಿ ಆಯ್ಕೆಯಾಗಿರುವ 545 ಅಭ್ಯರ್ಥಿಗಳ ಪೈಕಿ 53 ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಇವರಲ್ಲಿ 52 ಮಂದಿಗೆ 2022ರ ಏ.6ರಂದು ಷೋಕಾಸ್ ನೋಟಿಸ್ ನೀಡಿ, 2023 ಜೂನ್ 20ರಂದು ಅವರನ್ನು ಡಿಬಾರ್ ಮಾಡಲಾಗಿದೆ. 53 ಮಂದಿ ಆರೋಪಿಗಳನ್ನು ಹೊರತುಪಡಿಸಿ ಉಳಿದವರ ವಿರುದ್ಧ ಯಾವುದೇ ಆರೋಪಗಳು ಇಲ್ಲ. ಹಾಗಾಗಿ, ಅವರಿಗೆ ಕರ್ನಾಟಕ ನಾಗರಿಕ ಸೇವೆಗಳ ಕಾಯ್ದೆಯನ್ನು ಅನ್ವಯಿಸುವ ಮೂಲಕ ಕಳಂಕರಹಿತರನ್ನು ರಕ್ಷಿಸಬೇಕಿದೆ ಎಂದು ಅರ್ಜಿದಾರರ ಪರ ವಕೀಲ ಕೋರಿದರು.

ಪ್ರಕರಣದ ಹಿನ್ನೆಲೆ ಏನು:ರಾಜ್ಯದಲ್ಲಿ ನಡೆದಿದ್ದ ಪಿಎಸ್ಐ ನೇಮಕಾತಿಯಲ್ಲಿ ವಿದ್ಯುನ್ಮಾನ ಉಪಕರಣಗಳನ್ನು ಬಳಕೆ ಮಾಡಿರುವುದು. ಒಎಂಆರ್ ಶೀಟ್ ತಿದ್ದಿ ಆಯ್ಕೆಯಾಗಿರುವ ಸಂಬಂಧ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಸುಮಾರು 100ಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳನ್ನು ಮತ್ತು ಪೊಲೀಸ್ ನೇಮಕಾತಿ ವಿಭಾಗದ ಮುಖ್ಯಸ್ಥ ಅಮೃತ್ ಪಾಲ್ ಅವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದೆ.
ಈ ನಡುವೆ ನೇಮಕಾತಿ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ರದ್ದು ಪಡಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ಪ್ರಾಮಾಣಿಕ ಅಭ್ಯರ್ಥಿಗಳು, ನೇಮಕಾತಿ ಪ್ರಕ್ರಿಯೆಯನ್ನು ರದ್ದು ಪಡಿಸಿರುವ ಸರ್ಕಾರದ ಆದೇಶ ರದ್ದ ಮಾಡಬೇಕು. ಜತೆಗೆ, ಪ್ರಾಮಾಣಿಕ ಅಭ್ಯರ್ಥಿಗಳಿಗೆ ಹುದ್ದೆಗಳನ್ನು ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ವಕೀಲರ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್‌ ನಕಾರ

ABOUT THE AUTHOR

...view details