ಕರ್ನಾಟಕ

karnataka

ETV Bharat / state

ಕೇಂದ್ರ ಬಜೆಟ್ ಗೆ ದಿನಗಣನೆ: ಹಿರಿಯರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವಂತೆ ಬಂತು ಬೇಡಿಕೆ..! - ಹಿರಿಯರ ಆರೋಗ್ಯ ಸುರಕ್ಷತೆ ಹೆಚ್ಚಿಸಲು ಶಿಫಾರಸು

ಹೆಲ್ಪ್​ ಏಜ್​ ಇಂಡಿಯಾದಿಂದ ಬಜೆಟ್​ ಕುರಿತ ಶಿಫಾರಸ್ಸು - ಹಿರಿಯರ ಆರೋಗ್ಯ ಸುರಕ್ಷತೆ -ಹಿರಿಯರ ಕಾಳಜಿ ವಹಿಸುವವರಿಗೆ ತೆರಿಗೆ ವಿನಾಯಿತಿ - ವಯೋವೃದ್ಧರಿಗಾಗಿ ವಿಶೇಷ ಸಚಿವಾಲಯ ಬೇಡಿಕೆ

advice-on-budgeting-from-helpage-india
ಕೇಂದ್ರ ಬಜೆಟ್ ಗೆ ದಿನಗಣನೆ: ಹಿರಿಯರಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವಂತೆ ಬಂತು ಬೇಡಿಕೆ..!

By

Published : Jan 25, 2023, 11:07 PM IST

ಬೆಂಗಳೂರು : ವಯೋವೃದ್ಧರಿಗಾಗಿ ವಿಶೇಷ ಸಚಿವಾಲಯವನ್ನು ಸ್ಥಾಪಿಸಬೇಕು. ಆದಾಯ, ಆರೋಗ್ಯ ಭದ್ರತೆ, ಆರೈಕೆ ವಿಷಯಗಳಲ್ಲಿ ತಕ್ಷಣ ಪರಿಹಾರ ಒದಗಿಸುವ ಕ್ರಮಗಳನ್ನು ಕೈಗೊಳ್ಳಬೇಕು. ಹಿರಿಯ ಮಹಿಳೆಯರು ಮತ್ತು ಹಿರಿಯ ವಯೋವೃದ್ಧರ ಬಗ್ಗೆ ವಿಶೇಷವಾಗಿ ಗಮನಹರಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಸರ್ಕಾರದ ವಿವಿಧ ಅಂಗಸಂಸ್ಥೆಗಳಲ್ಲಿ ವಯಸ್ಸಾದ ವ್ಯಕ್ತಿಗಳಿಗೆ ಸೂಕ್ತ ಸ್ಥಾನಮಾನ ನೀಡುವುದಕ್ಕೆ ಅಗತ್ಯ ಕ್ರಮಗಳನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು ಎಂದು ಹೆಲ್ಪ್‌ ಏಜ್ ಇಂಡಿಯಾ ಮನವಿ ಮಾಡಿಕೊಂಡಿದೆ.

ಹೆಲ್ಪ್​ ಏಜ್​ ಇಂಡಿಯಾದಿಂದ ಬಜೆಟ್​ ಕುರಿತ ಶಿಫಾರಸ್ಸು :ವೃದ್ಧಾಪ್ಯದಲ್ಲಿ ಇರುವವರ ಅಗತ್ಯಗಳು ಮತ್ತು ಕಾಳಜಿಗಳಿಗಾಗಿ ಕೆಲಸ ಮಾಡುವ ಸರ್ಕಾರೇತರ ಸಂಸ್ಥೆಯಾಗಿರುವ ಹೆಲ್ಪ್‌ ಏಜ್ ಇಂಡಿಯಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ, ಬಜೆಟ್ ಕುರಿತ ತನ್ನ ಶಿಫಾರಸುಗಳನ್ನು ಸಲ್ಲಿಸಿದೆ. ವಯಸ್ಸಾದವರು ದಿನನಿತ್ಯ ಎದುರಿಸುವ ಸಂಕಷ್ಟಗಳನ್ನು ಮುನ್ನೆಲೆಗೆ ತಂದ ಕೋವಿಡ್‌ ಪಿಡುಗು ಕೊನೆಗೊಂಡ ನಂತರದ ದಿನಗಳಲ್ಲಿ ಹಿರಿಯರ ಆರೈಕೆ ಕ್ರಮಗಳನ್ನು ಕಾರ್ಯಗತಗೊಳಿಸಲು ತಕ್ಷಣದ ಕ್ರಮಗಳನ್ನು ಕೈಗೊಳ್ಳುವುದು, ಸರ್ಕಾರದ ಕಾರ್ಯಕ್ರಮಗಳಲ್ಲಿ ಅವುಗಳನ್ನು ಸೇರ್ಪಡೆ ಮಾಡುವುದು ಮತ್ತು ಆದ್ಯತೆ ಮೇರೆಗೆ ಅನುಷ್ಠಾನಗೊಳಿಸುವುದು ಈಗ ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ್ದಾಗಿದೆ. ಸದ್ಯಕ್ಕೆ ಅಂದಾಜು 14 ಕೋಟಿಯಷ್ಟು ವಯೋವೃದ್ಧರ ಜನಸಂಖ್ಯೆ ಹೊಂದಿರುವ ಭಾರತವು, ಮುಂದಿನ ಮೂರು ದಶಕಗಳಲ್ಲಿ ಕ್ಷಿಪ್ರ ಗತಿಯಲ್ಲಿ ವೃದ್ಧರ ಸಂಖ್ಯೆಯು ಏರಿಕೆಯಾಗುವ ಗಂಭೀರ ಸ್ವರೂಪದ ಸಮಸ್ಯೆಯನ್ನು ಎದುರಿಸಲಿದೆ.

ವಯೋವೃದ್ಧರ ಜನಸಂಖ್ಯೆಯು 2047ರ ವೇಳೆಗೆ ಶೇ 20ರಷ್ಟು ಹೆಚ್ಚಳಗೊಳ್ಳಲಿದೆ. ವಯೋವೃದ್ಧರ ಸಾಮಾಜಿಕ ಆರ್ಥಿಕ ಹಾಗೂ ಆರೋಗ್ಯದ ಅಗತ್ಯಗಳನ್ನು ಈಡೇರಿಸಲು ಗಮನಾರ್ಹ ಪ್ರಮಾಣದಲ್ಲಿ ಸಂಪನ್ಮೂಲ ಹಂಚಿಕೆಯ ಅಗತ್ಯ ಎದುರಾಗಲಿದೆ. ವಯಸ್ಸಾದ ಮಹಿಳೆಯರು ಮತ್ತು ಅತಿ ಹೆಚ್ಚು ವಯಸ್ಸಾದವರಿಗೆ ಸಂಬಂಧಿಸಿದಂತೆ ಸಾರ್ವತ್ರಿಕ ವ್ಯಾಪ್ತಿಗೆ ಆದ್ಯತೆ ನೀಡಿ ವೃದ್ಧಾಪ್ಯ ವೇತನವನ್ನು ಪ್ರತಿ ತಿಂಗಳಿಗೆ ಕನಿಷ್ಠ 3,000ಗಳಿಗೆ ಹೆಚ್ಚಿಸುವಂತೆ ನಾವು ವಿನಂತಿಸುತ್ತೇವೆ. ಕುಟುಂಬ ಆರೈಕೆ ನೀಡುವವರಿಗೆ ತೆರಿಗೆ ಪ್ರಯೋಜನಗಳನ್ನು ಒದಗಿಸುವ ಮೂಲಕ ಇಂತಹ ಆರೈಕೆ ಸೌಲಭ್ಯಗಳಿಗೆ ಉತ್ತೇಜನ ನೀಡಬೇಕು. ಸದ್ಯಕ್ಕೆ ಜಾರಿಯಲ್ಲಿ ಇರುವ ಹಣಕಾಸಿನ, ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಕಾಳಜಿ ವ್ಯವಸ್ಥೆಯನ್ನು ಅಗತ್ಯ ಪ್ರಮಾಣದ ಹಣ ಹಂಚಿಕೆಯೊಂದಿಗೆ ಬಲಪಡಿಸಬೇಕು. ವಯೋವೃದ್ಧರಿಗಾಗಿ ರೂಪಿಸಿರುವ ಕಾರ್ಯಕ್ರಮಗಳ ನಿರ್ವಹಣೆ ಹಾಗೂ ವೃದ್ಧರ ಬಹುಬಗೆಯ ಸಮಸ್ಯೆಗಳನ್ನು ಬಗೆಹರಿಸಲು ಆಯುಷ್ಮಾನ್‌ (ದೀರ್ಘಾಯುಷ್ಯ) ಸಚಿವಾಲಯ ಸ್ಥಾಪಿಸಬೇಕು ಎಂದು ಹೆಲ್ಪ್‌ಏಜ್‌ ಇಂಡಿಯಾದ ಸಿಇಒ ರೋಹಿತ್‌ ಪ್ರಸಾದ್‌ ಹೇಳಿದ್ದು ಈ ಸಂಬಂಧ ಶಿಫಾರಸ್ಸುಗಳನ್ನು ಕೇಂದ್ರಕ್ಕೆ ಸಲ್ಲಿಸಿದ್ದಾರೆ.

ಹಿರಿಯರ ಆರೋಗ್ಯ ಸುರಕ್ಷತೆ ಹೆಚ್ಚಿಸಲು ಶಿಫಾರಸುಗಳು ಹೀಗಿವೆ : ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ (ಪಿಎಂಜೆಎವೈ) ವೃದ್ಧರ ದಾಖಲಾತಿ ಆಂದೋಲನ, ವಿಶೇಷವಾಗಿ ವಯಸ್ಸಾದ ಮಹಿಳೆಯರಿಗೆ, ಹಿರಿಯ ವಯಸ್ಕರಿಗೆ ಮತ್ತು ಅಂಗವಿಕಲ ವೃದ್ಧರನ್ನು ಈ ಯೋಜನೆಗೆ ನೋಂದಣಿ ಮಾಡಿಕೊಳ್ಳುವುದು. ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ, ದೇಶದಲ್ಲಿನ 80ಕ್ಕೂ ಹೆಚ್ಚು ವಯಸ್ಸಾದವರು ಪಿಎಂಜಎವೈ ವ್ಯಾಪ್ತಿಗೆ ಒಳಪಡುತ್ತಾರೆ.

ಹಿರಿಯರ ಆರೋಗ್ಯ ರಕ್ಷಣೆಗೆ ರಾಷ್ಟ್ರೀಯ ಕಾರ್ಯಕ್ರಮ (ಎನ್‌ಪಿಎಚ್‌ಸಿಇ)ವು ವಯಸ್ಸಾದವರಲ್ಲಿ ಕಂಡುಬರುವ ವಯೋಸಹಜ ಆರೋಗ್ಯ ಸಮಸ್ಯೆಗಳ ಆರೈಕೆ ಕಾರ್ಯಕ್ರಮವಾಗಿದ್ದು, ಅನ್ಯ ಉದ್ದೇಶಗಳಿಗೆ ತೆಗೆದಿರಿಸುವ ನಿಧಿಯಲ್ಲಿ ಹಣ‌ ಹಾಕುವ ಬದಲು ಈ ವಿಶಿಷ್ಟ ಉಪಕ್ರಮಕ್ಕಾಗಿಯೇ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಹಂಚಿಕೆ ಮಾಡಿದರೆ ಈ ಕಾರ್ಯಕ್ರಮವು ಉತ್ತಮವಾಗಿ ಕಾರ್ಯನಿರ್ವಹಿಸಲಿದೆ.

ಹಿರಿಯರ ಕಾಳಜಿ ವಹಿಸುವವರಿಗೆ ತೆರಿಗೆ ವಿನಾಯಿತಿ :ಕೌಟುಂಬಿಕ ವ್ಯಾಪ್ತಿಯಲ್ಲಿ ಹಿರಿಯರ ಬಗ್ಗೆ ಕಾಳಜಿ ವಹಿಸುವವರಿಗೆ ಉತ್ತೇಜನ ನೀಡಲು, ಮೂಲ ತೆರಿಗೆ ವಿನಾಯ್ತಿ ಮಿತಿಯ ಆಚೆ ಹೊಸ ಹೆಚ್ಚುವರಿ ಆದಾಯ ತೆರಿಗೆ ವಿನಾಯ್ತಿ ಮಿತಿ ಪರಿಚಯಿಸಬೇಕು ಎಂದು ಸಂಘಟನೆಯು ಬಲವಾಗಿ ಪ್ರತಿಪಾದಿಸಿದೆ. ಕುಟುಂಬ ಆರೈಕೆದಾರರಿಗೆ ಸದ್ಯಕ್ಕೆ ನೀಡಲಾಗುತ್ತಿರುವ 2.5 ಲಕ್ಷದ ವಿನಾಯ್ತಿ ಮಿತಿ ಮೀರಿದ 3.5 ಲಕ್ಷ ಮೊತ್ತದ ಹೊಸ ಮೂಲ ತೆರಿಗೆ ವಿನಾಯ್ತಿಯನ್ನು ಮೀರಿ ಹೆಚ್ಚುವರಿ ಮಿತಿ ಪರಿಚಯಿಸಲು ಶಿಫಾರಸು ಮಾಡಲಾಗಿದೆ. 80 ವರ್ಷಗಳವರೆಗಿನ ಪೋಷಕರು / ಸಂಬಂಧಿಕರನ್ನು ನೋಡಿಕೊಳ್ಳುವ ತೆರಿಗೆ ಪಾವತಿದಾರರಿಗೆ 3.5 ಲಕ್ಷದವರೆಗೆ ವಿನಾಯ್ತಿ ಮಿತಿ ಮತ್ತು 80 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರನ್ನು ನೋಡಿಕೊಳ್ಳಲು 5.5 ಲಕ್ಷಗಳ ವಿನಾಯ್ತಿ ಮೊತ್ತ ನೀಡಲು ಒತ್ತಾಯಿಸಲಾಗಿದೆ. ವಯಸ್ಸಾದವರನ್ನು ನೋಡಿಕೊಳ್ಳುವ ವಯಸ್ಕ ಮಕ್ಕಳಲ್ಲಿ ಯಾರಾದರೊಬ್ಬರು ಈ ತೆರಿಗೆ ವಿನಾಯ್ತಿ ಸೌಲಭ್ಯ ಬಳಸಿಕೊಳ್ಳಬಹುದು.

ಮಹಿಳೆಯರಿಗೆ ವಿಶೇಷ ಆರೈಕೆ ಭತ್ಯೆ :ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವ ಮಹಿಳೆಯರಿಗೆ ಮತ್ತು ಕುಟುಂಬವನ್ನು ನೋಡಿಕೊಳ್ಳುವ ಹಿರಿಯ ಮಹಿಳೆಯರಿಗೆ ವಿಶೇಷ ಆರೈಕೆ ಭತ್ಯೆ ನೀಡಲು ಹೊಸ ಪ್ರಸ್ತಾವಗಳನ್ನು ಶಿಫಾರಸು ಮಾಡಲಾಗಿದೆ. ಕಡಿಮೆ ಆದಾಯದ ಕುಟುಂಬಗಳ ಮಹಿಳೆಯರನ್ನು ಈ ಯೋಜನೆಗೆ ಆಯ್ಕೆ ಮಾಡಬಹುದು.

ಒಟ್ಟಾರೆ ಜನಸಂಖ್ಯೆಯಲ್ಲಿ ವೃದ್ಧೆಯರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಮತ್ತು ವೃದ್ಧೆಯರಿಗೆ ಹೋಲಿಸಿದರೆ ವಯೋವೃದ್ಧರ ಸಂಖ್ಯೆಯಲ್ಲಿ ಅಸಮಾನ ಹೆಚ್ಚಳ ಕಂಡುಬರುತ್ತಿರುವುದು ಗಮನಿಸಬೇಕಾದ ವಿದ್ಯಮಾನವಾಗಿದೆ. ಪಿಎಂಜೆಎವೈನಂತಹ ಕೇಂದ್ರ ಸರ್ಕಾರದ ಹಲವಾರು ಪ್ರಮುಖ ಯೋಜನೆಗಳಲ್ಲಿ ಇಂತಹ ಮಹಿಳೆಯರನ್ನು ನೋಂದಾಯಿಸಬೇಕು. ಇವರನ್ನು ವೃದ್ಧಾಪ್ಯ ಪಿಂಚಣಿ ಯೋಜನೆಯಲ್ಲಿ ಆದ್ಯತೆ ಮೇರೆಗೆ ಸೇರ್ಪಡೆ ಮಾಡಬೇಕು. ಇವರಿಗಾಗಿ ದೀರ್ಘಾವಧಿಯ ಆರೈಕೆ ಸೌಲಭ್ಯಗಳನ್ನು ಜಾರಿಗೊಳಿಸುವ ತುರ್ತು ಅಗತ್ಯವೂ ಇದೆ.

ಹಿರಿಯರ ಆದಾಯ ಭದ್ರತೆ ಹೆಚ್ಚಿಸಲು ಶಿಫಾರಸುಗಳು ಹೀಗಿವೆ: ವಯಸ್ಸಾದ ಮಹಿಳೆಯರು ಮತ್ತು ಹಿರಿಯ ವೃದ್ಧೆಯರಿಗೆ ವೃದ್ಧಾಪ್ಯ ಪಿಂಚಣಿ ಸೌಲಭ್ಯ ಒದಗಿಸಲು ಈ ಯೋಜನೆಯನ್ನು ಸಾರ್ವತ್ರಿಕಗೊಳಿಸಬೇಕು. ಪ್ರತಿ ತಿಂಗಳ ಭತ್ಯೆ 3,000 ಇರಬೇಕು ಎನ್ನುವುದು ಅಪೇಕ್ಷಣೀಯ.
ದೇಶದಾದ್ಯಂತ ಕನಿಷ್ಠ ಸಾಮಾಜಿಕ ಪಿಂಚಣಿ ಹಂತವನ್ನು ವ್ಯಾಖ್ಯಾನಿಸುವಲ್ಲಿ ಕೇಂದ್ರ ಸರ್ಕಾರವು ಮುಂದಾಳತ್ವ ವಹಿಸಬೇಕು. ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮಕ್ಕೆ (ಎನ್‌ಎಸ್‌ಎಪಿ) ಕೇಂದ್ರ ಸರ್ಕಾರದ ಕೊಡುಗೆಯನ್ನು ಕನಿಷ್ಠ 200 ರಿಂದ 500ಕ್ಕೆ ಹೆಚ್ಚಿಸಬೇಕು. 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಪ್ರತಿ ಫಲಾನುಭವಿಗೆ ತಿಂಗಳಿಗೆ 1000 ಹಾಗೂ 80 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಪ್ರತಿ ಫಲಾನುಭವಿಗೆ ತಿಂಗಳಿಗೆ 1500 ರಂತೆ ನೀಡಲಾಗುತ್ತಿದೆ. ಕಳೆದ 14 ವರ್ಷಗಳಿಂದ ಈ ಮೊತ್ತವನ್ನು ಪರಿಷ್ಕರಿಸಿಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿ ವೃದ್ಧಾಪ್ಯ ಪಿಂಚಣಿ ಸರಾಸರಿ ಮೊತ್ತವು 500 ಮಾತ್ರ ಇದೆ.

ಹಿರಿಯ ನಾಗರೀಕರ ತೆರಿಗೆ ವಿನಾಯಿತಿ ಮಿತಿ ಹೆಚ್ಚಳಕ್ಕೆ ಆಗ್ರಹ :ಹಿರಿಯ ನಾಗರಿಕರಿಗೆ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 10 ಲಕ್ಷದವರೆಗೆ ಹೆಚ್ಚಿಸಿ. ಸದ್ಯಕ್ಕೆ ಆದಾಯ ತೆರಿಗೆ ಪಾವತಿಗೆ ಸಂಬಂಧಿಸಿದಂತೆ – 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ 3 ಲಕ್ಷ ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟವರಿಗೆ 5 ಲಕ್ಷದವರೆಗೆ ವಿನಾಯ್ತಿ ಮಿತಿ ನಿಗದಿಪಡಿಸಲಾಗಿದೆ. ವಯಸ್ಸಾದ ಮಹಿಳೆಯರು (60+) ಮತ್ತು ಅತ್ಯಂತ ಹಿರಿಯರ ವಿಭಾಗದಲ್ಲಿ ಬರುವ ಎಲ್ಲಾ ಹಿರಿಯ ನಾಗರಿಕರಿಗೆ ಹೆಚ್ಚಿನ ಮಿತಿಗಳನ್ನು ವಿಶೇಷವಾಗಿ ಪರಿಗಣಿಸಬಹುದಾಗಿದೆ.

ಮಧ್ಯಮವರ್ಗದ ಹಿರಿಯರ ಬ್ಯಾಂಕ್​ ಸ್ಥಿರ ಠೇವಣಿ ಬಡ್ಡಿದರ ಹೆಚ್ಚಳಕ್ಕೆ ಒತ್ತಾಯ : ಮಧ್ಯಮ ವರ್ಗದ ಹಿರಿಯರ ಜೀವನಮಟ್ಟವನ್ನು ಖಚಿತಪಡಿಸಿಕೊಳ್ಳಲು, ಹಿರಿಯ ನಾಗರೀಕರಿಗೆ ಬ್ಯಾಂಕ್ ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿದರಗಳನ್ನು ಹೆಚ್ಚಿಸಬೇಕು. ಅವರ ಆದಾಯವು ಅನೇಕ ಸಂದರ್ಭಗಳಲ್ಲಿ ಅವರಿಗೆ ಬಹು ಮುಖ್ಯ ಆಧಾರವಾಗಿರುವುದರಿಂದ ಅದಕ್ಕೆ ತೆರಿಗೆ-ವಿನಾಯಿತಿ ನೀಡಬೇಕು. ಸದ್ಯಕ್ಕೆ ಸೆಕ್ಷನ್ 80 ಟಿಟಿಬಿ ಅಡಿಯಲ್ಲಿ, ಹಿರಿಯ ನಾಗರಿಕರ 50,000ವರೆಗಿನ ಬಡ್ಡಿ ಆದಾಯವು ಆದಾಯ ತೆರಿಗೆಯಲ್ಲಿ ಕಡಿತಕ್ಕೆ ಅರ್ಹವಾಗಿದೆ. ಈ ಮಿತಿಯನ್ನು 1,00,000ಕ್ಕೆ ಹೆಚ್ಚಿಸಬಹುದು.

ಹಿರಿಯರನ್ನು ನರೇಗಾ ಯೋಜನೆಯಲ್ಲಿ ಒಳಗೊಳ್ಳಬೇಕು: ವಯಸ್ಸಾದವರಲ್ಲಿ ಕೆಲವರು ಜೀವನೋಪಾಯಕ್ಕೆ ದುಡಿಯುವ ಅನಿವಾರ್ಯತೆ ಇದೆ. ಈ ಕಾರಣಕ್ಕೆ ಬಡ ಕುಟುಂಬಗಳ ಹಿರಿಯರನ್ನು ನರೇಗಾ ಯೋಜನೆಯಲ್ಲಿ ಸೇರ್ಪಡೆ ಮಾಡುವುದನ್ನು ಪರಿಗಣಿಸಬೇಕು. ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 2005’ (ನರೇಗಾ ಯೋಜನೆ)– ಇದು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಬೇಕು ಎನ್ನುವವರು ಮತ್ತು ಕೌಶಲರಹಿತ ದುಡಿಮೆ ಮಾಡಲು ಸಿದ್ಧರಿರುವ ಕುಟುಂಬಗಳ ವಯಸ್ಕ ಸದಸ್ಯರಿಗೆ ಆರ್ಥಿಕ ವರ್ಷದಲ್ಲಿ ನೂರು ದಿನಗಳ ಕೂಲಿ ಉದ್ಯೋಗದ ಖಾತರಿಯನ್ನು ನೀಡುತ್ತದೆ. ಇಂತಹವರಿಗೆ ಕನಿಷ್ಠ ಶೇ 5ರಷ್ಟು ಉದ್ಯೋಗ ಮೀಸಲಾತಿ ನಿಗದಿಪಡಿಸಬೇಕು. ವಯಸ್ಸಾದ ವ್ಯಕ್ತಿಗಳನ್ನು ಅದರಲ್ಲೂ ವಿಶೇಷವಾಗಿ ವಯಸ್ಸಾದ ಮಹಿಳೆಯರನ್ನು ಈ ಯೋಜನೆಯಲ್ಲಿ ಸೇರ್ಪಡೆ ಮಾಡಲು ವಿಶೇಷ ಬಜೆಟ್ ಹಂಚಿಕೆ ಮಾಡಬೇಕು. 65ಕ್ಕಿಂತ ಹೆಚ್ಚಿನ ವಯಸ್ಸಿನ ಕಾರ್ಮಿಕರನ್ನು ಉದ್ಯೋಗದಲ್ಲಿ ಮುಂದುವರಿಸುವ ಉದ್ಯೋಗದಾತರಿಗೆ ತೆರಿಗೆ ಪ್ರೋತ್ಸಾಹ ನೀಡುವುದನ್ನು ಪರಿಗಣಿಸಬೇಕು.

ಒಟ್ಟಾರೆ, ವಯೋವೃದ್ಧರ ಬದುಕು ಹಸನುಗೊಳಿಸಲು ಸಾಮಾಜಿಕ-ಆರ್ಥಿಕ ಮತ್ತು ಆರೋಗ್ಯ ಸುರಕ್ಷತಾ ಕಾರ್ಯಕ್ರಮಗಳನ್ನು ಜಾರಿಗೆ ತರುವ ತುರ್ತು ಅಗತ್ಯ ಇದೆ. ಸದ್ಯಕ್ಕೆ ಜಾರಿಯಲ್ಲಿ ಇರುವ ಎನ್‌ಎಪಿಎಸ್‌ಆರ್‌ಸಿ (ಹಿರಿಯ ನಾಗರಿಕರಿಗೆ ರಾಷ್ಟ್ರೀಯ ಕ್ರಿಯಾ ಯೋಜನೆ) ಅಂತಹ ಸರ್ಕಾರಿ ಯೋಜನೆಗಳಿಗೆ ಬಜೆಟ್‌ ಅನುದಾನ ಹೆಚ್ಚಿಸುವ ಅಗತ್ಯ ಇದೆ. ಇದರ ಜೊತೆಗೆ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಬಹು ಬಗೆಯ ಸೇವೆಗಳ ಡೇ ಕೇರ್ ಸೆಂಟರ್ ಗಳಿಗೆ ವಿಶೇಷ ವಿಶೇಷ ಯೋಜನೆ ಸೇರ್ಪಡೆ ಮಾಡಬೇಕು. ಈ ಡೇ ಕೇರ್‌ ಸೆಂಟರ್ ಗಳಲ್ಲಿ ಪ್ರತಿದಿನ ಆರೈಕೆ, ವೈದ್ಯಕೀಯ, ದೈಹಿಕ ಕ್ಷಮತೆ, ಮನರಂಜನೆ ಮತ್ತು ಕೌಶಲಗಳ ಮರು ಸ್ಥಾಪನೆಯ ಸೌಲಭ್ಯಗಳನ್ನು ಒದಗಿಸಬೇಕು.

ಹಿರಿಯರ ಸ್ವಸಹಾಯ ಸಂಘಗಳ ಬಲವರ್ಧನೆ :ಬಡ ವೃದ್ಧರಿಗೆ ಜೀವನೋಪಾಯ ಮತ್ತು ಆದಾಯದ ಅವಕಾಶಗಳನ್ನು ಒದಗಿಸಲು ಹೆಲ್ಪ್‌ಏಜ್ ಇಂಡಿಯಾದ ಪ್ರವರ್ತಕ ಪರಿಕಲ್ಪನೆಯಾದ ಹಿರಿಯರ-ಸ್ವ-ಸಹಾಯ-ಗುಂಪುಗಳನ್ನು (ಇಎಸ್‌ಹೆಚ್‌ಜಿ) ಬಲಪಡಿಸಬೇಕು, ಗ್ರಾಮೀಣ ಪ್ರದೇಶಗಳಲ್ಲಿನ ಬಡ ವೃದ್ಧರಿಗೆ ಹೆಚ್ಚಿನ ಅನುದಾಯದ ಪ್ರಯೋಜನಗಳು ದೊರೆಯುವಂತೆ ಹೆಚ್ಚಿನ ಕಾಳಜಿ ವಹಿಸಬೇಕು.

ಹಿರಿಯರ ಡಿಜಿಟಲ್​ ಸಬಲೀಕರಣ ಆಗಬೇಕು :ಕೋವಿಡ್‌ ಪಿಡುಗಿನ ನಂತರದ ದಿನಗಳಲ್ಲಿ, ಹಿರಿಯರ ಪಾಲಿಗೆ ಡಿಜಿಟಲ್ ವಿಭಜನೆಯು ಗಮನಾರ್ಹವಾಗಿ ಹೆಚ್ಚಾಗಿದೆ. ಡಿಜಿಟಲ್ ಇಂಡಿಯಾ / ಇ-ಆಡಳಿತ ಕಾರ್ಯಕ್ರಮದ ಅಡಿಯಲ್ಲಿ ಬ್ಯಾಂಕಿಂಗ್, ಉಪಯುಕ್ತ ಸೇವೆಗಳು, ಆರೋಗ್ಯ, ಹಣಕಾಸು ಮತ್ತು ಇತರ ವಹಿವಾಟುಗಳು ಸೇರಿದಂತೆ ಎಲ್ಲಾ ಸೌಲಭ್ಯಗಳು ಡಿಜಿಟಲ್‌ಗೆ ರೂಪಾಂತರಗೊಂಡಿವೆ. ಹಿರಿಯರು ಹೊಸ ತಂತ್ರಜ್ಞಾನವನ್ನು ನಿಭಾಯಿಸಲು ಹೆಣಗಾಡುತ್ತಿದ್ದಾರೆ. ಡಿಜಿಟಲ್ ಇಂಡಿಯಾ/ ಸಿಎಸ್‌ಸಿ ಕಾರ್ಯಕ್ರಮದಡಿ ಹಾಗೂ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ವಿಶೇಷವಾಗಿ ಹಿರಿಯರಿಗಾಗಿ ಡಿಜಿಟಲ್ ಸಬಲೀಕರಣ ಕಾರ್ಯಕ್ರಮವನ್ನು ಅಗತ್ಯವಾದ ಹೆಚ್ಚುವರಿ ಅನುದಾನದ ನೆರವಿನಿಂದ ಜಾರಿಗೆ ತರಬೇಕು ಎಂದು ಹೆಲ್ಪ್‌ಏಜ್‌ ಬಲವಾಗಿ ಶಿಫಾರಸು ಮಾಡುತ್ತದೆ.

ಕೋವಿಡ್‌ ಪಿಡುಗಿನ ನಂತರದ ದಿನಗಳಲ್ಲಿ ಹಿರಿಯರು ಹೆಚ್ಚು ದುರ್ಬಲಗೊಂಡಿದ್ದಾರೆ. ಹಿರಿಯ ಜೀವಗಳ ದೀರ್ಘಾವಧಿಯ ಸುಸ್ಥಿರತೆಗೆ ಅಗತ್ಯ ಕ್ರಮಗಳನ್ನು ತುರ್ತಾಗಿ ತೆಗೆದುಕೊಳ್ಳುವ ಅವಶ್ಯಕತೆ ಇದೆ, ಇದರಿಂದಾಗಿ ಅವರು ಘನತೆ ಮತ್ತು ಕಾಳಜಿಯಿಂದ ಜೀವಿಸುವುದು ಈಗ ಹಿಂದೆಂದಿಗಿಂತಲೂ ಹೆಚ್ಚು ಅವಶ್ಯಕವಾಗಿದೆ.

ಇದನ್ನೂ ಓದಿ :ವಿಚ್ಛೇದಿತ ಸರ್ಕಾರಿ ಉದ್ಯೋಗಿ ಸೇವೆಯಲ್ಲಿರುವಾಗಲೇ ಮೃತಪಟ್ಟರೆ ಅವಲಂಬಿತರ ನೇಮಕಾತಿ : ಸರ್ಕಾರದ ಸ್ಪಷ್ಟನೆ

ABOUT THE AUTHOR

...view details