ಬೆಂಗಳೂರು: ರಾಜ್ಯದ 19 ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪತ್ತೆ ಹಚ್ಚುವ ಕೃತಕ ಬುದ್ಧಿಮತ್ತೆ ಆಧಾರಿತ ತಂತ್ರಜ್ಞಾನ ಅಳವಡಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ವಿಕಾಸ ಸೌಧದಲ್ಲಿ ಇಂದು ಅಷ್ಟ್ರಾಜೆನಕಾ ಇಂಡಿಯಾ ಸಂಸ್ಥೆಯೊಂದಿಗೆ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಸೇವೆ ರಾಜ್ಯದ ಜನರಿಗೆ ಹೆಚ್ಚು ಉಪಯೋಗವಾಗಲಿದೆ. ಆರಂಭಿಕ ಹಂತದಲ್ಲಿಯೇ ಶ್ವಾಸಕೋಶದ ಕ್ಯಾನ್ಸರ್ ಪತ್ತೆ ಹಚ್ಚುವ AI ಆಧಾರಿತ ತಂತ್ರಜ್ಞಾನವನ್ನು ಅಷ್ಟ್ರಾಜೆನಕಾ ಸಂಸ್ಥೆಯವರು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಳವಡಿಸಲು ಮುಂದೆ ಬಂದಿದ್ದಾರೆ. ಉಚಿತವಾಗಿ ಸೇವೆ ಒದಗಿಸಲು ಆರೋಗ್ಯ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ ಎಂದರು.
ಮೊದಲ ಹಂತದಲ್ಲಿ ರಾಜ್ಯದ 19 ಜಿಲ್ಲಾಸ್ಪತ್ರೆಗಳಲ್ಲಿ ಈ ಸೇವೆ ಲಭ್ಯವಾಗಲಿದೆ. ಒಂದು ವರ್ಷದವರೆಗೆ ಉಚಿತ ಸೇವೆ ನೀಡಲು ಅಸ್ಟ್ರಾಜೆನಿಕಾ ಸಂಸ್ಥೆಯವರು ಒಪ್ಪಿಕೊಂಡಿದ್ದಾರೆ ಎಂದರು. ಒಂದು ವರ್ಷದ ವರೆಗೆ ತಂತ್ರಜ್ಞಾನದ ಸದುಪಯೋಗನ್ನ ಪರಿಶೀಲಿಸಿ ಬಳಿಕ ಉಳಿದ ಜಿಲ್ಲೆಗಳಿಗೂ ಈ ಸೇವೆಯನ್ನ ವಿಸ್ತರಿಸುವುದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಅಲ್ಲದೇ ನಾಳೆಯಿಂದಲೇ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಂತ್ರಜ್ಞಾನ ಅಳವಡಿಕೆಯಾಗಲಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆಯುವಂತೆ ಇದೇ ವೇಳೆ ಹೇಳಿದರು.