ಬೆಂಗಳೂರು :ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಗುಜರಾತ್ ಸರ್ಕಾರ ಭಗವದ್ಗೀತೆಯನ್ನು ಪಠ್ಯದಲ್ಲಿ ಪರಿಚಯ ಮಾಡಿದ ರೀತಿ, ರಾಜ್ಯದಲ್ಲಿಯೂ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ಬಗ್ಗೆ ಸಮಿತಿ ರಚಿಸಿ ಶಿಕ್ಷಣ ತಜ್ಞರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ತಿಳಿಸಿದ್ದಾರೆ.
ವಿಧಾನಪರಿಷತ್ನ ಶೂನ್ಯ ವೇಳೆಯಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಪ್ರಾಣೇಶ್, ಶಾಲೆ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ಮಾಡುವ ವಿಚಾರ ಪ್ರಸ್ತಾಪಿಸಿದರು. ಗುಜರಾತ್ ಸರ್ಕಾರ ಭಗವದ್ಗೀತೆಯನ್ನು ಪಠ್ಯದಲ್ಲಿ ಪರಿಚಯ ಮಾಡಿದೆ.
ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಇರಲಿದೆ. ಭಗವದ್ಗೀತೆಯನ್ನ ಪಠ್ಯದಲ್ಲಿ ಸೇರ್ಪಡೆ ಮಾಡಬೇಕು. 2022-23ನೇ ಸಾಲಿನ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಆಗಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಇತ್ತೀಚಿನ ದಿನಗಳಲ್ಲಿ ನೈತಿಕ ಶಿಕ್ಷಣ ಎನ್ನುವುದು ದೂರ ಆಗಿದೆ. ನೈತಿಕ ಶಿಕ್ಷಣ ಬೇಕು ಎಂಬ ಒತ್ತಾಯಗಳು ಕೇಳಿ ಬರುತ್ತಿವೆ. ಭಗವದ್ಗೀತೆ ಸೇರ್ಪಡೆ ಬಗ್ಗೆ ಸಮಿತಿ ರಚನೆ ಮಾಡುತ್ತೇವೆ. ಸಮಿತಿ ರಚನೆ ಬಳಿಕ ಸಿಎಂ, ಶಿಕ್ಷಣ ತಜ್ಞರ ಜೊತೆ ಚರ್ಚೆ ಮಾಡಿ ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆ ಮಾಡುವ ಬಗ್ಗೆ ಸಚಿವರು ಸುಳಿವು ಕೊಟ್ಟರು.
ಪಠ್ಯಪುಸ್ತಕ ಮುದ್ರಣ ಕಾರ್ಯ ಮುಗಿದಿದೆ :2022-23ನೇ ಸಾಲಿನ ಶೈಕ್ಷಣಿಕ ವರ್ಷದ ಪಠ್ಯಪುಸ್ತಕ ಮುದ್ರಣ ಕಾರ್ಯ ಪೂರ್ಣಗೊಂಡಿದೆ. ಸಕಾಲದಲ್ಲಿ ಸರಿಯಾಗಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಹಿಜಾಬ್ ತೀರ್ಪು ಸಂಬಂಧ ಬಂದ್ಗೆ ಕರೆ ನೀಡಿದ್ದು ನ್ಯಾಯಾಂಗ ನಿಂದನೆ: ರಿಟ್ ಸಲ್ಲಿಕೆ
ವಿಧಾನಪರಿಷತ್‌ನಲ್ಲಿ ಶೂನ್ಯ ವೇಳೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸಚೇತಕ ಪ್ರಕಾಶ್ ರಾಥೋಡ್ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವ ನಾಗೇಶ್, ಶಾಲೆಗಳಿಗೆ ವಿತರಣೆ ಮಾಡಬೇಕಿರುವ ಎಲ್ಲಾ ಪುಸ್ತಕಗಳ ಮುದ್ರಣ ಕಾರ್ಯ ಮುಗಿದಿದ್ದು, ವಿತರಣಾ ಹಂತದಲ್ಲಿದೆ. ಇನ್ನು ಎರಡು ತಿಂಗಳಿನಲ್ಲಿ ಶಾಲೆಗಳು ಆರಂಭಗೊಳ್ಳಲಿವೆ. ಶಾಲಾ ಆರಂಭದ ವೇಳೆಗೆ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತದೆ. ಪಠ್ಯಪುಸ್ತಕ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಬಾರಿ ಮಾರ್ಚ್ 27ರಂದೇ ಕೈವಾರ ತಾತಯ್ಯ ಜಯಂತಿ : ಕೈವಾರ ತಾತಯ್ಯ ಜಯಂತಿ ಆಚರಣೆ ಕುರಿತು ಸಿಎಂ ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ. ಮಾರ್ಚ್ 27ರಂದು ಜಯಂತಿ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ, ಅದನ್ನು ಮಾರ್ಚ್ 18ರಂದು ಮಾಡಿ ಎಂದು ಆ ಸಮಾಜದ ಪ್ರಮುಖರು ಒತ್ತಾಯಿಸುತ್ತಿದ್ದಾರೆ.
ಆದರೆ, ಈ ಬಾರಿ ಆಗಲ್ಲ, ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಬೇಕಿದೆ. ಹಾಗಾಗಿ, ಈ ಬಾರಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಾರ್ಚ್ 27ರಂದು ಜಯಂತಿ ನಡೆಸಲಾಗುತ್ತದೆ. ಮುಂದಿನ ವರ್ಷದಿಂದ ಮಾರ್ಚ್ 18ರಂದು ಕೈವಾರ ತಾತಯ್ಯ ಜಯಂತಿ ಆಚರಣೆ ಮಾಡಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ವಿಧಾನಪರಿಷತ್‌ನಲ್ಲಿ ತಿಳಿಸಿದರು.