ಬೆಂಗಳೂರು: ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರ ನಿವಾಸಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿ, ಸಮಾಲೋಚನೆ ನಡೆಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ, ಶಾಸಕ ಚಲುವರಾಯಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ, ಶಾಖಾಮಠದ ಸ್ವಾಮೀಜಿಗಳು ಉಪಸ್ಥಿತರಿದ್ದರು. ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ನಿನ್ನೆ ಸಿಬಿಐ ದಾಳಿ ನಡೆದಿತ್ತು. ಈ ಹಿನ್ನೆಲೆ ವಿವಿಧ ಧಾರ್ಮಿಕ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಇಂದು ದಿನವಿಡಿ ಶಿವಕುಮಾರ್ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಬಹುತೇಕ ಪ್ರಮುಖ ಒಕ್ಕಲಿಗ ನಾಯಕರು ಹಾಗೂ ಧಾರ್ಮಿಕ ಮುಖಂಡರು ಈ ಸಂದರ್ಭ ಡಿ.ಕೆ. ಶಿವಕುಮಾರ್ಗೆ ಧೈರ್ಯ ತುಂಬಿದ್ದಾರೆ.
ಡಿ.ಕೆ. ಶಿವಕುಮಾರ್ ಭೇಟಿ ಮಾಡಿದ ಆದಿಚುಂಚನಗಿರಿ ಶ್ರೀಗಳು ರಾಜ್ಯದ ಪ್ರಮುಖ ಒಕ್ಕಲಿಗ ನಾಯಕರಾಗಿ ಹೊರಹೊಮ್ಮುತ್ತಿರುವ ಡಿ.ಕೆ. ಶಿವಕುಮಾರ್ ಅವರನ್ನು ರಾಜಕೀಯವಾಗಿ ಹತ್ತಿಕ್ಕಲಾಗುತ್ತಿದೆ ಎಂದು ಬಹುತೇಕ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಶಿವಕುಮಾರ್ ನೈತಿಕ ಬಲ ಹೆಚ್ಚಿಸುವ ಸಲುವಾಗಿ ಅವರ ನಿವಾಸಕ್ಕೆ ಆಗಮಿಸಿ ಧೈರ್ಯ ತುಂಬುವ ಕಾರ್ಯ ನಡೆಯುತ್ತಿದೆ.
ಇಂದು ಬೆಳಗ್ಗೆ ನಂಜಾವಧೂತ ಶ್ರೀಗಳು ಶಿವಕುಮಾರ್ ಮನೆಗೆ ಆಗಮಿಸಿ ಸಮಾಲೋಚಿಸಿ ತೆರಳಿದ್ದರು. ಇದೀಗ ಸಂಜೆ ಆದಿಚುಂಚನಗಿರಿ ಮಠದ ಶ್ರೀಗಳು ಆಗಮಿಸಿ ಸಮಾಲೋಚಿಸಿದರು. ಧಾರ್ಮಿಕ ಹಾಗೂ ಜಾತಿಯ ಬೆಂಬಲ ತಮಗೆ ಸದಾ ಇರಲಿದೆ. ಇಂತಹ ಅಡೆತಡೆಗಳನ್ನು ಮೀರಿ ತಾವು ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರಾಗಿ ಮುಂದುವರಿದು ಪ್ರಗತಿಗೆ ಸಹಕರಿಸಬೇಕು ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ಧಾರ್ಮಿಕ ಮುಖಂಡರನ್ನು ರಾಜಕೀಯ ನಾಯಕರು ಭೇಟಿ ಮಾಡುವುದು ವಾಡಿಕೆ. ಈ ಹಿಂದೆ ಸಾಕಷ್ಟು ಸಾರಿ ಇಂತಹ ಚಟುವಟಿಕೆ ನಡೆದಿದೆ. ಆದರೆ ಪ್ರಮುಖ ಒಕ್ಕಲಿಗ ನಾಯಕರಾಗಿ ಗುರುತಿಸಿಕೊಂಡಿರುವ ಶಿವಕುಮಾರ್ ಅವರನ್ನು ಅವರ ನಿವಾಸಕ್ಕೆ ಆಗಮಿಸಿ ಧಾರ್ಮಿಕ ಮುಖಂಡರು ಭೇಟಿ ಮಾಡಿ ಸಮಾಲೋಚಿಸುವುದು ಅಚ್ಚರಿಯ ಬೆಳವಣಿಗೆಯಾಗಿದೆ.