ಬೆಂಗಳೂರು: ಪಿಎಸ್ಐ ಪರೀಕ್ಷಾ ನೇಮಕಾತಿ ಹಗರಣ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಹೆಡ್ಕಾನ್ ಸ್ಟೇಬಲ್ ಹರೀಶ್ ವಿರುದ್ದ ಪ್ರಕರಣ ದಾಖಲಾಗಿತ್ತು. ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪಾಲ್ ಎಂಟು ದಿನಗಳ ಕಾಲ ಪಡೆದಿದ್ದ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಸಿಐಡಿ ಅಧಿಕಾರಿಗಳು ಒಪ್ಪಿಸಿದ್ದಾರೆ.
ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ವಿಚಾರಣೆ ವೇಳೆ ಹಲವು ಸಂಗತಿಗಳು ಬಯಲಿಗೆ ಬಂದಿವೆ. ಅಮೃತ್ ಪಾಲ್ ಅಕ್ರಮದಲ್ಲಿ ನೇರವಾಗಿ ಭಾಗಿಯಾಗದೇ ಪರೋಕ್ಷವಾಗಿ ಕೃತ್ಯ ಎಸಗಿರುವುದನ್ನು ತನಿಖಾಧಿಕಾರಿಗಳು ಕಂಡುಕೊಂಡಿದ್ದಾರೆ. ಬೆಂಗಳೂರಿನಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಸಮಗ್ರ ತನಿಖೆ ನಡೆಸಲು ಸರ್ಕಾರಕ್ಕೆ ಸಲಹೆ ನೀಡಿರುವುದಾಗಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ವಿಚಾರಣೆ ವೇಳೆ ಪಾಲ್ ಹೇಳಿದ್ದೇನು ?:ಅಕ್ರಮಕ್ಕೆ ಸಂಬಂಧಿಸಿದಂತೆ ರಾಮಮೂರ್ತಿನಗರದಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ಡಿವೈಎಸ್ಪಿ ಎನ್. ಶ್ರೀಹರ್ಷ ಅವರ ಮುಂದೆ 'ನಾನೇನು ತಪ್ಪು ಮಾಡಿಲ್ಲ. ನಾನು ನಂಬಿಕೆಯಿಂದ ಕೆಳ ಹಂತದ ಅಧಿಕಾರಿಗೆ ಸ್ಟ್ರಾಂಗ್ ರೂಮ್ ಕೀ ಕೊಟ್ಟಿದ್ದೆ. ಆದರೆ, ಅವರು ಪಿಎಸ್ಐ ಪರೀಕ್ಷೆಯ ಉತ್ತರ ಪತ್ರಿಕೆ ತಿದ್ದಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ನನ್ನ ಪಾತ್ರವಿಲ್ಲ. ಸಮಗ್ರ ತನಿಖೆ ನಡೆಸಲು ಸರ್ಕಾರಕ್ಕೆ ಸಲಹೆ ಕೊಟ್ಟಿದ್ದೆ ನಾನು' ಎಂದು ಹೇಳಿಕೆ ನೀಡಿರುವುದಾಗಿ ಸಿಐಡಿ ಮೂಲಗಳು ತಿಳಿಸಿವೆ.
ಪಿಎಸ್ಐ ಪ್ರಕರಣ ಸಂಬಂಧ ಹೈಗ್ರೌಂಡ್ಸ್, ಹಲಸೂರು, ರಾಮಮೂರ್ತಿನಗರ, ಯಲಹಂಕ ನ್ಯೂಟೌನ್ ಹಾಗೂ ಕೋರಮಂಗಲ ಐದು ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಹೈಗ್ರೌಂಡ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸಿಐಡಿ ಡಿವೈಎಸ್ಪಿ ಶೇಖರ್ ಬಂಧಿಸಿ ವಿಚಾರಣೆ ನಡೆಸಿದ್ದರು. ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಹರೀಶ್ , ಪಿಎಸ್ಐ ಮನೋಜ್ ಕುಮಾರ್ ಪರೀಕ್ಷಾ ಅಕ್ರಮ ಎಸಗಿದ ಪ್ರಕರಣದಡಿ ಪಾಲ್ ಅವರನ್ನು ಡಿವೈಎಸ್ಪಿ ಎನ್. ಶ್ರೀಹರ್ಷ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು.
ತನಿಖೆಗೆ ಸಲಹೆ ಕೊಟ್ಟಿದ್ದೇ ನಾನು..!:545 ಮಂದಿ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಸಂಬಂಧ ಪೊಲೀಸ್ ಕಸ್ಟಡಿಯಲ್ಲಿರುವ ಪಾಲ್ ಅವರನ್ನು ತನಿಖಾಧಿಕಾರಿ ಡಿವೈಎಸ್ಪಿ ಶ್ರೀಹರ್ಷ ವಿಚಾರಣೆ ನಡೆಸಿದ್ದಾರೆ. ಸಾಕ್ಷ್ಯಧಾರ ಸಮೇತ ಮುಂದಿಟ್ಟು ಪ್ರಶ್ನಿಸಿದರೂ ತಮ್ಮ ಮೇಲೆ ಬಂದಿರುವ ಆಪಾದನೆಗಳನ್ನ ತಳ್ಳಿ ಹಾಕುತ್ತಿದ್ದಾರೆ.