ಬೆಂಗಳೂರು:ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನದಿಂದ ಮುಂದಾಗುವ ಅನಾಹುತ ತಪ್ಪಿಸಲಾಗಿದೆ. ಮತ್ತೋರ್ವ ಶಂಕಿತ ನಾಪತ್ತೆಯಾಗಿದ್ದು, ಆತನ ಪತ್ತೆಗಾಗಿ ಶೋಧ ನಡೆಸುತ್ತಿರುವುದಾಗಿ ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ ಪ್ರಕರಣ ಸಂಬಂಧ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ತಂಡ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಶಿವಮೊಗ್ಗದ ಸೈಯ್ಯದ್ ಯಾಸಿನ್ (21) ಹಾಗೂ ಮಂಗಳೂರಿನ ಮಾಝ್ ಮುನೀರ್ (22) ಎಂಬುವರನ್ನು ಕಳೆದ ಮಂಗಳವಾರ ಬಂಧಿಸಿತ್ತು. ವಿಚಾರಣೆ ವೇಳೆ ಶಂಕಿತರು ತುಂಗಾ ನದಿ ತೀರದಲ್ಲಿ ಪ್ರಾಯೋಗಿಕವಾಗಿ ಬಾಂಬ್ ಸ್ಫೋಟಿಸಿದ್ದರು ಎಂಬ ವಿಚಾರ ಹೊರಬಂದಿತ್ತು.
ಈ ಸಂಬಂಧ ಅಲೋಕ್ ಕುಮಾರ್ ಮಾತನಾಡಿ, ನದಿ ತೀರದಲ್ಲಿ ಯಾರು ಇಲ್ಲದ ಜಾಗ ಗುರುತಿಸಿ ಟ್ರಯಲ್ ಬ್ಲಾಸ್ಟ್ ಮಾಡಿದ್ದಾರೆ. ಬ್ಲಾಸ್ಟ್ ಮಾಡಿದ ನಂತರ ಗುರುತು ಉಳಿಯದಂತೆ ನದಿಯಲ್ಲಿ ಅವಶೇಷಗಳು ಹೋಗುತ್ತವೆ. ಹೀಗಾಗಿ ನದಿ ತೀರ ಆಯ್ಕೆ ಮಾಡಿದ್ದರು. ಶಿವಮೊಗ್ಗ ಪೊಲೀಸರ ತನಿಖೆಯಿಂದ ಸ್ಲೀಪರ್ ಸೆಲ್ಗಳನ್ನ ರೀಚ್ ಆಗಿದ್ದೇವೆ. ನಾಪತ್ತೆಯಾಗಿರುವ ಶಂಕಿತ ಶಾರೀಕ್ ಮೊಹಮ್ಮದ್ ಟಾರ್ಗೆಟ್ ಸೆಲೆಕ್ಟ್ ಮಾಡುವ ಕೆಲಸ ಮಾಡಿದ್ದ. ಶಾರೀಕ್ ಸಿಕ್ಕ ನಂತರ ಶಂಕಿತರ ಉದ್ದೇಶ ಗೊತ್ತಾಗಲಿದೆ. ಬಂಧಿತರಿಗೆ ಕರ್ನಾಟಕದಲ್ಲಿ ಆಸ್ತಿಪಾಸ್ತಿಗಳ ನಾಶ ಮಾಡುವ ಉದ್ದೇಶವಿತ್ತು ಎಂದರು.