ಬೆಂಗಳೂರು: ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಹೆಚ್ಚಳ ಸಂಬಂಧ ಸಂವಿಧಾನದ 9ನೇ ಪರಿಚ್ಛೇದಕ್ಕೆ (ಶೆಡ್ಯೂಲ್) ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇಂದಿನ ಸಂಪುಟ ಸಭೆಯಲ್ಲಿ ಇದು ಚರ್ಚೆಗೆ ಬಂದಿಲ್ಲ. ಮೀಸಲಾತಿ ಕುರಿತು 9ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲಿ ಉತ್ತರ ನೀಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಆದರೆ, ಮೀಸಲಾತಿ ಬಗ್ಗೆ ಚರ್ಚೆ ನಡೆದಿದ್ದು, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದೆ. ಸ್ವಾಮೀಜಿ ಸೇರಿದಂತೆ ಸಮುದಾಯದ ಹಲವರ ಹೋರಾಟದ ಫಲವಾಗಿ ಕೆಲ ತಿಂಗಳ ಹಿಂದೆ ಸರ್ಕಾರ ಪರಿಶಿಷ್ಟ ವರ್ಗಗಳ ದಶಕಗಳ ಬೇಡಿಕೆ ಈಡೇರಿಸಿದ್ದು, ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಅನುಮೋದನೆ ನೀಡಿತ್ತು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ವಿಧಾನಸಭೆಯಲ್ಲಿ ಮಂಡಿಸಿದ್ದ ವಿಧೇಯಕಕ್ಕೆ ಆಡಳಿತ ಹಾಗೂ ಪ್ರತಿಪಕ್ಷಗಳ ಎಲ್ಲ ಸದಸ್ಯರು ಒಕ್ಕೊರಲಿನ ಸಹಮತ ವ್ಯಕ್ತಪಡಿಸಿ ಸರ್ವಾನುಮತದ ಬೆಂಬಲ ಸೂಚಿಸಿದ್ದರು.
ಈ ಸಂಬಂಧ ನಾಗಮೋಹನ್ ದಾಸ್ ಆಯೋಗದ ಶಿಫಾರಸಿಗೆ ಸಂಪುಟ ಸಭೆ ಸಮ್ಮತಿ ನೀಡಿತ್ತು. ಎಸ್ಸಿ ಮೀಸಲಾತಿಯನ್ನು ಶೇ.15 ರಿಂದ ಶೇ. 17 ಕ್ಕೆ ಅಂದರೆ ಶೇ.2 ರಷ್ಟು ಏರಿಕೆ ಮಾಡಿದ್ದರೆ, ಎಸ್ಟಿ ಮೀಸಲಾಯಿತಿಯನ್ನು ಶೇ.3 ರಿಂದ ಶೇ. 7ಕ್ಕೆ ಅಂದರೆ ಶೇ. 4 ಕ್ಕೆ ಏರಿಕೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಆ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡದ ಒಟ್ಟು ಮೀಸಲಾತಿಯನ್ನು ಶೇ.6ಕ್ಕೆ ಹೆಚ್ಚಳ ಮಾಡಲಾಗಿದೆ. ಇದೀಗ ಕಾನೂನು ರಕ್ಷಣೆ ಪಡೆಯಲು ಶೆಡ್ಯೂಲ್ 9 ರ ವ್ಯಾಪ್ತಿಗೆ ಮೀಸಲಾತಿ ತರಲು ಸರ್ಕಾರ ಮುಂದಾಗಿದೆ.