ಬೆಂಗಳೂರು: ಅನಿಮೇಶನ್, ವಿಶುವಲ್ ಎಫೆಕ್ಟ್, ಗೇಮಿಂಗ್ ಹಾಗೂ ಕಾಮಿಕ್ಸ್ ಕ್ಷೇತ್ರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಎವಿಜಿಸಿ ನೀತಿಯನ್ನು ಪರಿಷ್ಕರಿಸಿ ಇ-ಸ್ಪೋರ್ಟ್ಸ್ ಅನ್ನು ಅದರಡಿಯಲ್ಲಿ ತರಬೇಕು ಎಂದು ಟೆಕ್ನಿಕಲ್ನ ಭಾರತದ ಮುಖ್ಯಸ್ಥ ಬಿರೇನ್ ಘೋಷ್ ಮನವಿ ಮಾಡಿದ್ದಾರೆ.
ಬೆಂಗಳೂರು ಟೆಕ್ ಶೃಂಗಸಭೆ-2020ರ ಭಾಗವಾಗಿ ಶುಕ್ರವಾರ ಸಂಜೆ ನಡೆದ "ಎವಿಜಿಸಿ ಜಗತ್ತಿನ ಕೇಂದ್ರವಾಗುವತ್ತ ಬೆಂಗಳೂರು" ವಿಷಯದ ಮೇಲೆ ಮಾತನಾಡಿದರು. ಕೇಂದ್ರ ಸರ್ಕಾರ ಎವಿಜಿಸಿ(ಅನಿಮೇಶನ್, ವಿಶುವಲ್ ಎಫೆಕ್ಟ್, ಗೇಮಿಂಗ್ ಹಾಗೂ ಕಾಮಿಕ್ಸ್ )ಅನ್ನು ಚಾಂಪಿಯನ್ ಕ್ಷೇತ್ರವೆಂದು ಗುರುತಿಸಿದೆ. ಬ್ರಾಡ್ ಕ್ಯಾಸ್ಟರ್‌ಗಳು, ಚಿತ್ರ ನಿರ್ಮಾಣಕಾರರು, ಸ್ಟುಡಿಯೋಗಳು, ಒಟಿಪಿ ಸ್ಟ್ರೀಮರ್‌ಗಳು, ಗೇಮ್ ಪಬ್ಲಿಷರ್‌ಗಳು, ಪ್ರೊಡಕ್ಷನ್ ಹೌಸ್‌ಗಳು, ಗೇಮ್ ಡೆವಲಪರ್‌ಗಳು, ಮಾಧ್ಯಮಗಳು ಎವಿಜಿಸಿಯ ಮಾರುಕಟ್ಟೆಗಳಾಗಿವೆ. ಭಾರತದಲ್ಲಿ ಮುಂದಿನ 2 ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಎಂಎಸ್ಎಂಇ ಹಾಗೂ ಫ್ರೀಲ್ಯಾನ್ಸಿಂಗ್ ಎರಡೂ ವಿಭಾಗಗಳಲ್ಲಿ ಒಟ್ಟಾಗಿ 7 ದಶಲಕ್ಷ ಉದ್ಯೋಗಗಳನ್ನು ಸೃಷ್ಟಿಸಬಹುದಾಗಿದೆ. ಬೆಂಗಳೂರಿಗೆ ದೇಶದ ಎವಿಜಿಸಿ ಕೇಂದ್ರವಾಗುವ ಸಾಮರ್ಥ್ಯವಿದೆ ಎಂದರು.
ಇ-ಸ್ಪೋರ್ಟ್ಸ್, ಹೆಕ್ಸಾ, ಅನಿಮೇಶನ್ನನ್ನು ದೃಷ್ಟಿಯಲ್ಲಿಟ್ಟುಕೊಂಡು ಐಪಿ ಅಭಿವೃದ್ಧಿಯ ಪ್ರೋತ್ಸಾಹಕ್ಕೆ ನೆರವಾಗಬೇಕು. ಕಂಪ್ಯೂಟರ್ ಗೇಮ್ಸ್, ಇ-ಸ್ಪೋರ್ಟ್ಸ್ ಅನಿಮೇಶನ್ ಅನ್ನು ಹೊಸ ಹಂತಕ್ಕೆ ಕೊಂಡೊಯ್ದಿದೆ. ಇದು ಭವಿಷ್ಯದ ಕ್ಷೇತ್ರವಾಗಿದೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ, ದೊಡ್ಡ ಪ್ರಮಾಣದ ರಫ್ತಿಗೆ ವೇದಿಕೆ ಕಲ್ಪಿಸುವಂತಹ ಮೆಗಾ ಹಬ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ಕಾರ್ಯನೀತಿ ಅಳವಡಿಸಿಕೊಳ್ಳಬೇಕು. ಬ್ರಾಂಡ್ ಬೆಂಗಳೂರಿಗೆ ಮಾರುಕಟ್ಟೆ ಕಲ್ಪಿಸಲು ದೊಡ್ಡ ಶೃಂಗಗಳಲ್ಲಿ ಪಾಲ್ಗೊಳ್ಳಬೇಕು. ಎರಡು, ಮೂರನೇ ಹಂತದ ನಗರಗಳ ಯುವಕರಿಗೆ ಟೆಕ್ ಉದ್ಯೋಗಗಳತ್ತ ಸೆಳೆಯಲು ಖಾಸಗಿ ಕ್ಷೇತ್ರದೊಂದಿಗೆ ಕೈಜೋಡಿಸಿ ಸ್ಕಾಲರ್‌ಶಿಪ್ ಪ್ರೋಗ್ರಾಂ ಅಳವಡಿಸಬೇಕು. ಈಗಿರುವ ಸ್ವರೂಪದಲ್ಲೇ ಮುಂದಿನ 3 ವರ್ಷಗಳ ಕಾಲ ಸಂಪೂರ್ಣ ಸಿಒಇ ಮೂಲಸೌಕರ್ಯ ಒದಗಿಸಬೇಕು ಹಾಗೂ ಎವಿಜಿಸಿ ನೀತಿಯನ್ನು ಪರಿಷ್ಕರಿಸಬೇಕು. ಇ-ಸ್ಪೋರ್ಟ್ಸ್ ಇಮರ್ಸ್ ಮೀಡಿಯಾವನ್ನು ಇದರ ಅಡಿಯಲ್ಲಿ ತರಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಭಾರತದಲ್ಲಿ ಅನಿಮೇಶನ್ ಪ್ರಗತಿ ಅದ್ಭುತ:
ಹಾಲಿವುಡ್ ಚಿತ್ರ ನಿರ್ಮಾಪಕ ರಾಬರ್ಟ್ ವಿಂಥರ್ ಮಾತನಾಡಿ, ಜಗತ್ತಿನಾದ್ಯಂತ ಎವಿಜಿಸಿ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತಿದೆ. ಅನಿಮೇಶನ್‌ಗೆ ಮಾನ್ಯತೆ ದೊರಕುತ್ತಿದೆ. ಭಾರತಲ್ಲಿ ಅನಿಮೇಶನ್ ಕ್ಷೇತ್ರದ ಪ್ರಗತಿ ಅದ್ಭುತವಾಗಿದೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ, ಮಕ್ಕಳ ಅಚ್ಚುಮೆಚ್ಚಿನ ಛೋಟಾ ಭೀಮ್‌ನ ಯಶಸ್ಸಿನ ಉದಾಹರಣೆ ನೀಡಿದರು.