ಬೆಂಗಳೂರು: ಸರ್ವರಿಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಜಗತ್ತಿಗೆ ಕಟ್ಟಿಕೊಟ್ಟವರೇ ಬಸವಾದಿ ಪ್ರಥಮರು. ಆದರೆ ಬಸವತತ್ವ ಅನುಯಾಯಿಗಳಾದ ಲಿಂಗಾಯಿತ, ವೀರಶೈವರೇ ಇಂದು ಸಾಮಾಜಿಕ ನ್ಯಾಯದಿಂದ ವಂಚಿತರಾಗಿರುವುದು ನಿಜಕ್ಕೂ ದೌರ್ಭಾಗ್ಯ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಮಹಾ ಪ್ರಧಾನಕಾರ್ಯದರ್ಶಿ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವೀರಶೈವ ಮತ್ತು ಲಿಂಗಾಯಿತ ಸಮುದಾಯದ ಜನರಿದ್ದಾರೆ. ಕರ್ನಾಟಕದಲ್ಲಿ ಸುಮಾರು ಶೇ.18ರಿಂದ 20ರಷ್ಟು ಲಿಂಗಾಯಿತ-ವೀರಶೈವರಿದ್ದಾರೆ ಎಂದು ಜನಗಣತಿಯಲ್ಲಿ ಉಲ್ಲೇಖಿಸಲಾಗಿದೆ. ವೀರಶೈವ ಮತ್ತು ಲಿಂಗಾಯಿತರು ಮುಂದುವರಿದವರು ಎಂದು ಕೆಲವರು ವಾದಿಸುತ್ತಾರೆ. ಆದರೆ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿಯೂ ಅತ್ಯಂತ ಹಿಂದುಳಿದಿರುವ ಸಮುದಾಯದಲ್ಲಿ ಲಿಂಗಾಯಿತ ವೀರಶೈವ ಸಮುದಾಯ ಸೇರುತ್ತದೆ.
ಕೇಂದ್ರ ಲೋಕಸೇವಾ ಆಯೋಗದ ನೇಮಕಾತಿ ಇರಲಿ, ಬ್ಯಾಂಕಿಂಗ್ ನೇಮಕಾತಿ ಮಂಡಳಿ, ರೈಲ್ವೆ ನೇಮಕಾತಿ ಮಂಡಳಿ, ಸ್ಟಾಫ್ ಸೆಲೆಕ್ಷನ್ ಕಮಿಷನ್ ಎಸ್.ಎಸ್.ಸಿ. ನೇಮಕಾತಿ ಆಗಿರಲಿ ಅಥವಾ ಕೇಂದ್ರ ಸರ್ಕಾರದ ಸಾರ್ವಜನಿಕ ಉದ್ದಿಮೆಗಳ ನೇಮಕಾತಿಯೇ ಆಗಿರಲಿ ಇವುಗಳಲ್ಲಿ ಲಿಂಗಾಯಿತ ಮತ್ತು ವೀರಶೈವ ಸಮುದಾಯದಿಂದ ಆಯ್ಕೆಯಾಗಿ ನೇಮಕಗೊಂಡಿರುವ ಪಾಲು ನಗಣ್ಯ. ಇದಕ್ಕೆ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಈ ಸಮುದಾಯ ಹಿಂದುಳಿದಿರುವುದೇ ಕಾರಣವಾಗಿದೆ. ಅದೇ ರೀತಿ ಲಿಂಗಾಯಿತ ಮತ್ತು ವೀರಶೈವ ಸಮುದಾಯದ ವಿದ್ಯಾರ್ಥಿಗಳು ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಐಟಿ, ಐಐಎಂ, ಕೇಂದ್ರೀಯ ವಿಶ್ವವಿದ್ಯಾಲಯ, ರೈಲ್ವೆ ವಿಶ್ವವಿದ್ಯಾಲಯ, ವಿಧಿ ವಿಜ್ಞಾನ ವಿಶ್ವವಿದ್ಯಾಲಯ, ಭಾರತೀಯ ವಿಜ್ಞಾನ ಮಂದಿರ ಸೇರಿದಂತೆ ರಾಷ್ಟ್ರೀಯ ಪ್ರಾಮುಖ್ಯತೆಯ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುವುದರಿಂದ ವಂಚಿತರಾಗಿದ್ದಾರೆ. ಹೀಗಾಗಿ ಲಿಂಗಾಯಿತ ಮತ್ತು ವೀರಶೈವ ಸಮುದಾಯದ ಎಲ್ಲ ಉಪ ಪಂಗಡಗಳನ್ನೂ ಇತರ ಹಿಂದುಳಿದ ವರ್ಗಗಳ ಕೇಂದ್ರ ಪಟ್ಟಿಯಲ್ಲಿ ಸೇರಿಸಿದರೆ ಆಗ ಇವರಿಗೆ ಸಾಮಾಜಿಕ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಮಹಾಸಭಾ ಅಭಿಪ್ರಾಯಪಡುತ್ತದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.