ಕರ್ನಾಟಕ

karnataka

ETV Bharat / state

ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶಯುಕ್ತ ಹಾಲು ವಿತರಣೆಗೆ ಕ್ರಮ: ಸಚಿವ ಸುರೇಶ್‌ ಕುಮಾರ್‌ - ಪೌಷ್ಟಿಕಾಂಶಯುಕ್ತ ಹಾಲು ವಿತರಣೆ

ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್‌ ವತಿಯಿಂದ ನೀಡಲಾಗುತ್ತಿರುವ ಪೌಷ್ಠಿಕಾಂಶಯುಕ್ತ ಹಾಲು ವಿತರಣೆಯನ್ನು ರಾಜ್ಯದ ಎಲ್ಲೆಡೆ ವಿಸ್ತರಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಸಚಿವ ಸುರೇಶ್‌ ಕುಮಾರ್‌

By

Published : Sep 13, 2019, 12:30 PM IST

ಬೆಂಗಳೂರು: ಅದಮ್ಯ ಚೇತನ ಹಾಗೂ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್‌ ವತಿಯಿಂದ ನೀಡಲಾಗುತ್ತಿರುವ ಪೌಷ್ಠಿಕಾಂಶಯುಕ್ತ ಹಾಲು ವಿತರಣೆಯನ್ನು ರಾಜ್ಯದ ಎಲ್ಲೆಡೆ ವಿಸ್ತರಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಹೇಳಿದ್ದಾರೆ.

ಅಲ್ಲದೆ, ಮಧ್ಯಾಹ್ನದ ಬಿಸಿಯೂಟವನ್ನು ಸರ್ಕಾರಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪಿಯುಸಿ ವಿದ್ಯಾರ್ಥಿಗಳಿಗೂ ವಿಸ್ತರಿಸುವ ಬಗ್ಗೆ ಅದಮ್ಯ ಚೇತನ ಮುಖ್ಯಸ್ಥೆ ತೇಜಸ್ವಿನಿ ಅನಂತಕುಮಾರ್‌ ಅವರ ಪ್ರಸ್ತಾಪದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸಚಿವ ಸುರೇಶ್‌ ಕುಮಾರ್‌

ನಗರದ ಅದಮ್ಯ ಚೇತನ ಸಂಸ್ಥೆಯ ಆವರಣದಲ್ಲಿ ಆಯೋಜಿಸಿದ್ದ ಅದಮ್ಯ ಚೇತನ ಮಧ್ಯಾಹ್ನದ ಬಿಸಿಯೂಟ ಪಡೆಯುವ ಸರ್ಕಾರಿ ಹಾಗೂ ಅನುದಾನಿತ ಮಕ್ಕಳಿಗೆ ಸಾಯಿಶ್ಯೂರ್‌ ಪೌಷ್ಟಿಕಾಂಶಯುಕ್ತ ಹಾಲು ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ನಾನು ಶಿಕ್ಷಣ ಸಚಿವನಾಗಿ ಅಲ್ಲ, ಅನಂತಕುಮಾರ್‌ ಅವರ ಕುಟುಂಬ ಸದಸ್ಯನಾಗಿ ಬಂದಿದ್ದೇನೆ. ಅನಂತಕುಮಾರ್‌ ಮತ್ತು ನಾನು 1986 ರಿಂದ ಒಟ್ಟಿಗೆ ಕಾರ್ಯನಿರ್ವಹಿಸುತ್ತಾ ಬಂದಿದ್ದೇವೆ. ನಮ್ಮ ಕರ್ನಾಟಕದ ನಿಜವಾದ ಸಾಧಕಿ ಶ್ರೀಮತಿ ತೇಜಸ್ವಿನಿ ಅನಂತಕುಮಾರ್‌ ಅವರ ಕರೆಗೆ ಓಗೊಟ್ಟು ಈ ದಿನ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು.

ಇಲ್ಲಿ ಎರಡು ಅಂತಃಕರಣ ಇರುವ ಸಂಸ್ಥೆಗಳು ಜೊತೆಗೂಡಿವೆ. ಇದಕ್ಕೆ ಸರಿಯಾಗಿ 16 ದಿನಗಳ ಹಿಂದೆ ಸತ್ಯ ಸಾಯಿ ಶಿಕ್ಷಣ ಸಂಸ್ಥೆಗೆ ಹೋದಾಗ ಸಾಯಿ ಶ್ಯೂರ್‌ ಬಗ್ಗೆ ನನ್ನ ಗೆಳೆಯರು ಹಲವು ಮಾಹಿತಿಗಳನ್ನು ನೀಡಿದ್ದರು. ಮಕ್ಕಳ ಆರೋಗ್ಯಕ್ಕೋಸ್ಕರ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಕ್ಯಾಷ್‌ ಕೌಂಟರ್‌ ಇಲ್ಲದೆ ಎಲ್ಲಾ ರೀತಿಯ ಚಿಕಿತ್ಸೆ ನೀಡುವ ಒಂದೇ ಒಂದು ಆಸ್ಪತ್ರೆ ಎಂದರೆ ಅದು ವೈಟ್ ಫೀಲ್ಡ್ ನಲ್ಲಿರುವ ಶ್ರೀ ಸತ್ಯ ಸಾಯಿ ಆಸ್ಪತ್ರೆ. ಮಕ್ಕಳಿಗೆ ಪೌಷ್ಠಿಕಾಂಶ ಕೊಡಬೇಕು ಎನ್ನುವ ಈ ಅಂತಃಕರಣದ ಕಾರ್ಯಕ್ರಮಕ್ಕೆ ಎಚಿವರು ಧನ್ಯವಾದ ತಿಳಿಸಿದರು.

ಅದಮ್ಯ ಚೇತನದ ಪ್ರೇರಣ ಶಕ್ತಿ ಎಂದರೆ ಡಾ ತೇಜಸ್ವಿನಿ ಅನಂತಕುಮಾರ್‌. ಇಂದು ಅದಮ್ಯ ಚೇತನ ಮಧ್ಯಾಹ್ನದ ಊಟದ ಕಾರ್ಯಕ್ರಮಕ್ಕೆ ಒಂದು ಸ್ವರೂಪ ನೀಡಿದೆ. ಕೇವಲ ಊಟ ವಲ್ಲ, ಪ್ರೀತಿಯಿಂದ ತಯಾರಿಸಿದ ಆಹಾರವನ್ನು ಮಕ್ಕಳಿಗೆ ನೀಡುವ ಉತ್ತಮ ಕಾರ್ಯಮಾಡುತ್ತಿದ್ದಾರೆ. ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್‌ ಜೊತೆಗೂಡಿ ಪೌಷ್ಟಿಕಾಂಶ ನೀಡುವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಸಚಿವ ಸುರೇಶ್​ ಕುಮಾರ್​ ಹಾರೈಸಿದರು.

ತೇಜಸ್ವಿನಿ ಅನಂತಕುಮಾರ್‌ ಅವರು ಪಿಯುಸಿ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುವ ನಿಟ್ಟಿನಲ್ಲಿ ವ್ಯಕ್ತಪಡಿಸಿರುವ ಪ್ರಸ್ತಾಪಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಕಾರಾತ್ಮಕವಾಗಿ ಚಿಂತಿಸುತ್ತಿದ್ದು, ಆರ್ಥಿಕವಾಗಿ ಖರ್ಚುವೆಚ್ಚದ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಇದನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ತಿಳಿಸಿದರು.

ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ. ತೇಜಸ್ವಿನಿ ಅನಂತಕುಮಾರ್‌ ಮಾತನಾಡಿ, ಮುಂಬರುವ ದಿನಗಳಲ್ಲಿ ಮಧ್ಯಾಹ್ನದ ಊಟದ ಜೊತೆಯಲ್ಲಿಯೇ ಮಕ್ಕಳಿಗೆ ಬೆಳಗಿನ ಉಪಹಾರ ನೀಡುವ ನಿಟ್ಟಿನಲ್ಲಿ ಈಗಾಗಲೇ ಅದಮ್ಯ ಚೇತನ ಮುಂದಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕಲಬುರಗಿ ಜಿಲ್ಲೆಯ 10 ಸಾವಿರ ಮಕ್ಕಳಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್‌ ಜೊತೆಗೂಡಿ ಉಪಹಾರ ಒದಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದ್ರು. ಕಾರ್ಯಕ್ರಮದಲ್ಲಿ ಶ್ರೀ ಸಾಯಿ ಅನ್ನಪೂರ್ಣ ಟ್ರಸ್ಟ್​ನ ಟ್ರಸ್ಟಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ABOUT THE AUTHOR

...view details