ಬೆಂಗಳೂರು :ಡ್ರಗ್ ಜಾಲ ನಂಟು ಆರೋಪ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆದಂ ಪಾಷಾ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೊಸ ಡ್ರಾಮಾ ಶುರು ಮಾಡಿದ್ದು, ಅಧಿಕಾರಿಗಳಿಗೆ ಹೊಸ ತಲೆನೋವು ಪ್ರಾರಂಭವಾಗಿದೆ.
ನ್ಯಾಯಾಂಗ ಬಂಧನದಲ್ಲಿರುವ ಪಾಷಾನ ಕ್ವಾರಂಟೈನ್ ಅವಧಿ ಮುಗಿದಿದ್ದು, ಸಾಮಾನ್ಯ ಸೆಲ್ಗೆ ಶಿಫ್ಟ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ವಾರೆಂಟ್ನಲ್ಲಿ ಪಾಷಾ ಪುರುಷ ಎಂದಿದೆ. ಆದರೆ, ಆತ ಮಾತ್ರ ನಾನು ಮಹಿಳೆ ನನಗೆ ಮಹಿಳಾ ಸೆಲ್ ಕೊಡಿ ಎಂದು ಹಠ ಹಿಡಿದಿದ್ದಾನೆ.
ಪುರುಷರ ಸೆಲ್ ಬೇಡ ಎಂದು ಆತ ವರಸೆ ಶುರು ಮಾಡಿದಾಗ ವಾರೆಂಟ್ ತೋರಿಸಿದ ಅಧಿಕಾರಿಗಳು, 'ವಾರೆಂಟ್ನಲ್ಲಿ ಪುರುಷ ಎಂದಿದೆ. ಮಹಿಳೆಯರ ಸೆಲ್ಗೆ ಹೇಗೆ ಹಾಕಲು ಆಗುತ್ತೆ' ಎಂದು ಆತನನ್ನು ಪ್ರಶ್ನಿಸಿದ್ದಾರೆ. ಆದರೂ, ಪಾಷಾ ಮಾತ್ರ ಅದನ್ನು ಒಪ್ಪಲು ಸಿದ್ದನಿರಲಿಲ್ಲ. ಪಾಷಾನ ವರಸೆಯಿಂದ ಬೇಸತ್ತ ಜೈಲಾಧಿಕಾರಿಗಳು ಜೈಲಿನ ವಿಶೇಷ ಆಸ್ಪತ್ರೆಯ ಸೆಲ್ಗೆ ಬಾಗಿಲು ಹಾಕಿ ಲಾಕ್ ಮಾಡಿದ್ದಾರೆ.
ಆದರೂ, ಹಠ ಬಿಡದ ಪಾಷಾ ಜೈಲಿನ ಸಿಬ್ಬಂದಿಗೆ ರೋಧನೆ ಕೊಡುತ್ತಿದ್ದು, ನಾನು ಇಲ್ಲಿದ್ದು, ಏನ್ ಮಾಡ್ಲಿ, ರಾಗಿಣಿ- ಸಂಜನಾ ಜೊತೆ ಬಿಟ್ರೆ ಮಾತನಾಡಬಹುದು, ಸಮಯ ಕಳೆಯಬಹುದು ಎನ್ನುತ್ತಿದ್ದಾನೆ. ಈತನ ಗೋಳು ಕೇಳಿ ಸುಸ್ತಾದ ಅಧಿಕಾರಿಗಳು, ಆತ ಇರುವ ಸೆಲ್ ಬಳಿ ಕೇವಲ ಒಬ್ಬ ಸಿಬ್ಬಂದಿಯನ್ನು ನೇಮಿಸಿ, ಆ ಕಡೆ ತಲೆ ಹಾಕದೆ ಸುಮ್ಮನಾಗಿದ್ದಾರೆ ಎಂದು ಜೈಲಿನ ಉನ್ನತ ಮೂಲಗಳಿಂದ ತಿಳಿದು ಬಂದಿದೆ.