ಬೆಂಗಳೂರು : ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ಬಂದು ಮನೆಯೊಡತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿ ಮಹಿಳೆಯನ್ನ ನಂದಿನಿ ಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಲಕ್ಷ್ಮೀ (38) ಬಂಧಿತ ಆರೋಪಿ. ಮೇ 25ರಂದು ಲಗ್ಗೆರೆಯ ಪಾರ್ವತಿ ನಗರದಲ್ಲಿರುವ ಶಾಂತಮ್ಮ ಎಂಬುವರ ಮನೆಯನ್ನು ಬಾಡಿಗೆಗೆ ಕೇಳುವ ನೆಪದಲ್ಲಿ ಬಂದಿದ್ದ ಆರೋಪಿ, ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದು ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಳು.
ಕಟ್ಟಿಗೆ ತುಂಡುಗಳಿಂದ ಮಾಲಕಿ ಮೇಲೆ ಹಲ್ಲೆ: ಕೋವಿಡ್ನಿಂದ ಪತಿ ಮೃತಪಟ್ಟ ಬಳಿಕ ಶಾಂತಮ್ಮ ಒಬ್ಬರೇ ವಾಸವಿದ್ದರು. ನಾಲ್ಕು ಬಾಡಿಗೆ ಮನೆಗಳ ಪೈಕಿ ಎರಡು ಮನೆಗಳು ಖಾಲಿ ಇತ್ತು. ಕೃತ್ಯಕ್ಕೂ ಎರಡು ದಿನಗಳ ಹಿಂದೆ ಮನೆ ಬಾಡಿಗೆಗೆ ಕೇಳಿಕೊಂಡು ಬಂದಿದ್ದ ಆರೋಪಿ, ಮೇ 25ರಂದು ಮಧ್ಯಾಹ್ನ ಮನೆ ಬಳಿ ಬಂದು, ಹಾಲು ಉಕ್ಕಿಸುವುದಾಗಿ ಹೇಳಿದ್ದಳು. ಮಾಲಕಿ ಶಾಂತಮ್ಮ ಮನೆಯೊಳಗೆ ಕರೆದೊಯ್ದಾಗ ಅಲ್ಲಿಯೇ ಇದ್ದ ಕಟ್ಟಿಗೆ ತುಂಡುಗಳಿಂದ ಆಕೆಯ ತಲೆ ಮೇಲೆ ಹಲ್ಲೆ ಮಾಡಿದ್ದಳು. ಪರಿಣಾಮ ಶಾಂತಮ್ಮ ಸ್ಥಳದಲ್ಲೇ ಕುಸಿದು ಬಿದ್ದಾಗ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಳು.
ಈ ಹಿಂದೆಯೂ ಕೃತ್ಯ ಎಸಗಿ ಜೈಲು ಪಾಲಾಗಿದ್ದ ಆರೋಪಿ:ಕೋರಮಂಗಲ ಆಸ್ಪತ್ರೆಯೊಂದರಲ್ಲಿ ನರ್ಸ್ ಕೆಲಸ ಮಾಡಿಕೊಂಡಿದ್ದ ಲಕ್ಷ್ಮೀ, ಕೆಲ ತಿಂಗಳ ಹಿಂದೆ ಕೂಡಾ ಅಶೋಕನಗರದ ಸೆಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ರೋಗಿಯ ಚಿನ್ನದ ಸರ ಕಳವು ಮಾಡಿದ್ದಳು.
20 ಗ್ರಾಂ ಚಿನ್ನದ ಸರ ವಶಕ್ಕೆ ಪಡೆದ ಪೊಲೀಸರು: ಆಸ್ಪತ್ರೆಗೆ ನರ್ಸ್ ವೇಷದಲ್ಲಿ ಬಂದಿದ್ದ ಆರೋಪಿ ವೃದ್ಧ ರೋಗಿಯೊಬ್ಬರಿಗೆ ಮಂಪರು ಬರುವ ಇಂಜೆಕ್ಷನ್ ನೀಡಿ, ಅವರ ಕತ್ತಿನಲ್ಲಿದ್ದ ಚಿನ್ನದ ಸರ ಕಳವು ಮಾಡಿದ್ದಳು. ಪ್ರಕರಣದಲ್ಲಿ ಆರೋಪಿಯನ್ನ ಅಶೋಕ ನಗರ ಪೊಲೀಸರು ಬಂಧಿಸಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಮತ್ತೊಮ್ಮೆ ಅದೇ ಚಾಳಿ ಮುಂದುವರೆಸಿರುವ ಆರೋಪಿಯನ್ನ ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದು, 80 ಸಾವಿರ ರೂ ಮೌಲ್ಯದ 20 ಗ್ರಾಂ ಚಿನ್ನದ ಸರ ವಶಕ್ಕೆ ಪಡೆದಿದ್ದಾರೆ.
ಪತ್ನಿಗೆ ಚಾಕುವಿನಿಂದ ಇರಿದು ರಸ್ತೆಯಲ್ಲಿ ಮಲಗಿದ ಪತಿ.. ಇನ್ನೊಂದೆಡೆ ಪತ್ನಿಗೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಕುಮಾರ್ ಎಂಬಾತ ಸುಧಾಮಣಿ ಎಂಬವರ ಮೇಲೆ ಹಲ್ಲೆ ಮಾಡಿರುವ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡು ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕುಮಾರ್ ಬುಧವಾರ ತಡರಾತ್ರಿ ಪತ್ನಿಗೆ ಮನಸೋ ಇಚ್ಛೆ ಚಾಕುವಿನಿಂದ ಇರಿದು ತಲೆ, ಬೆನ್ನು, ಕೈಗಳಿಗೆ ತೀವ್ರ ಪೆಟ್ಟು ಬಿದ್ದಿದೆ.
ಹಲ್ಲೆ ಮಾಡಿ ಮಲಗಿದ್ದ ಕುಮಾರನನ್ನು ಚಾಮರಾಜನಗರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ನಶೆಯಿಂದ ಹೊರಬಾರದ ಪರಿಣಾಮ ಯಾವುದೇ ವಿಚಾರಣೆ ಇನ್ನೂ ನಡೆಸಿಲ್ಲ ಎಂದು ತಿಳಿದುಬಂದಿದೆ. ಚಾಮರಾಜನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ಇದನ್ನೂ ಓದಿ:Crime news: ಪತ್ನಿಗೆ ಚಾಕುವಿನಿಂದ ಇರಿದು ರಸ್ತೆಯಲ್ಲಿ ಮಲಗಿದ ಪತಿ.. ಗಲಾಟೆಗೆ ಕಾರಣ ನಿಗೂಢ