ಬೆಂಗಳೂರು: ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆ ಬೇಜವಾಬ್ದಾರಿತನ ಮತ್ತೆ ಹೆಚ್ಚಾಗಿದೆ. ಸ್ಯಾಂಡಲ್ವುಡ್ ನಟಿ ಸುಧಾರಾಣಿ ಜೊತೆ ಖಾಸಗಿ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತನೆ ಮಾಡಿರುವ ಘಟನೆ ತಡರಾತ್ರಿ ನಡೆದಿದೆ.
'ಮನ ಮೆಚ್ಚಿದ' ನಟಿ ಸುಧಾರಾಣಿಗೆ ಖಾಸಗಿ ಆಸ್ಪತ್ರೆ ಮೇಲೆ ಮುನಿಸು: ಕಾರಣ? - ಬೆಂಗಳೂರು
ಶೇಷಾದ್ರಿಪುರಂ ಅಪೊಲೋ ಆಸ್ಪತ್ರೆ ವಿರುದ್ಧ ನಟಿ ಸುಧಾರಾಣಿ ಆಕ್ರೋಶ ವ್ಯಕ್ತಪಡಿದ್ದಾರೆ. ಖಾಸಗಿ ಆಸ್ಪತ್ರೆಯ ಬೇಜವಾಬ್ದಾರಿತನಕ್ಕೆ ಬೇಸತ್ತ ಅವರು ಪೊಲೀಸ್ ಕಮಿಷನರ್ ಸಹಾಯ ಹಸ್ತ ಚಾಚಿದ್ದಾರೆ.
ತಡರಾತ್ರಿ ಸುಧಾರಾಣಿ ಅಣ್ಣನ ಪುತ್ರಿಗೆ ಕಿಡ್ನಿಸ್ಟೋನ್ ಸಮಸ್ಯೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ನಟಿ ಸುಧಾರಾಣಿ ಆಕೆಯನ್ನು ಕರೆದುಕೊಂಡು ಶೇಷಾದ್ರಿಪುರಂ ಅಪೊಲೋ ಆಸ್ಪತ್ರೆಗೆ ಆ್ಯಂಬುಲೆನ್ಸ್ನಲ್ಲಿ ಬಂದಿದ್ದಾರೆ. ಆದರೆ, ಆಸ್ಪತ್ರೆ ಸಿಬ್ಬಂದಿ ಅವರನ್ನು ರಾತ್ರಿ 10ಗಂಟೆಯಿಂದ ಸುಮಾರು ಒಂದು ಗಂಟೆಗಳ ಕಾಲ ಗೇಟ್ನಿಂದ ಹೊರಗೆ ನಿಲ್ಲಿಸಿ ರೋಗಿಯ ಜೀವದ ಜೊತೆ ಚೆಲ್ಲಾಟವಾಡಿದ್ದಾರೆ. ಅಷ್ಟೇ ಅಲ್ಲದೆ, ಆಸ್ಪತ್ರೆಯಲ್ಲಿ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ ಎಂದು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಿಂದ ಬೇಸತ್ತು ಕೊನೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಬಳಿಕ ಆಯುಕ್ತರ ಸಹಾಯದಿಂದ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.
ಘಟನೆ ಕುರಿತು ಮಾತನಾಡಿದ ಸುಧಾರಾಣಿ, ವೈದ್ಯರು ದೇವರ ಸಮಾನ ಎನ್ನುತ್ತೇವೆ. ಆದ್ರೆ ಇಲ್ಲಿನ ಪರಿಸ್ಥಿತಿಯೇ ಬೇರೆ ಇದೆ. ನಮ್ಮನ್ನು ರಾತ್ರಿ 10 ಗಂಟೆಯಿಂದ ಹೊರ ನಿಲ್ಲಿಸಿದ್ರು. ಕಮಿಷನರ್ಗೆ ಫೋನ್ ಮಾಡಿದ ಬಳಿಕ ಒಳಗೆ ಸೇರಿಸಿಕೊಂಡಿದ್ದಾರೆ. ಸಮಸ್ಯೆ ಬಂದ ಕೂಡಲೇ ಆ್ಯಂಬುಲೆನ್ಸ್ ಕರೆಸಿ ಇಲ್ಲಿಗೆ ಬಂದ್ರೆ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ ಅಂತಿದ್ದಾರೆ. ಅಸಲಿಗೆ ಯಾವ ಕಾರಣಕ್ಕೆ ತಲೆ ಸುತ್ತು ಬಂದಿದೆ ಎಂದು ಗೊತ್ತಿಲ್ಲ. ಆ್ಯಂಬುಲೆನ್ಸ್ ಡ್ರೈವರ್ ಆಕ್ಸಿಜನ್ ನೀಡುತ್ತಿದ್ದರೆ, ಆಸ್ಪತ್ರೆ ಸಿಬ್ಬಂದಿ ತಮಾಷೆ ನೋಡುತ್ತಿದ್ದಾರೆ. ಗೇಟ್ ಒಳಗೆ ನಮ್ಮನ್ನ ಒಂದು ಗಂಟೆ ಬಿಡಲಿಲ್ಲ. ಸಾಮಾನ್ಯ ವ್ಯಕ್ತಿಗೆ ಇಂತಹ ಸಮಸ್ಯೆ ಆದ್ರೆ ಏನು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಸುಧಾರಾಣಿ ಅಣ್ಣನ ಪುತ್ರಿಯನ್ನು ಅಪೋಲೋ ಆಸ್ಪತ್ರೆಯಿಂದ ರಾಮಯ್ಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.