ಬೆಂಗಳೂರು: ತನ್ನಿಂದ ಹಣ ಹೂಡಿಕೆ ಮಾಡಿಸಿಕೊಂಡು ಮೂರು ವರ್ಷವಾದರೂ ಲಾಭಾಂಶ ಹಾಗೂ ಅಸಲು ನೀಡದೆ ವಂಚಿಸಿರುವುದಾಗಿ ಆರೋಪಿಸಿ ಸ್ನೇಹಿತ ಸೇರಿ ಮೂವರ ವಿರುದ್ಧ ನಟಿ ಸಂಜನಾ ಗಲ್ರಾನಿ ಇಂದಿರಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಂಚನೆ ಸಂಬಂಧ ಸಂಜನಾ ದೂರು ನೀಡಿದ ಮೇರೆಗೆ ಸ್ನೇಹಿತನಾಗಿದ್ದ ರಾಹುಲ್ ತೊನ್ಸೇ ಅಲಿಯಾಸ್ ರಾಹುಲ್ ಶೆಟ್ಟಿ, ಸಹಚರರಾದ ರಾಮಕೃಷ್ಣ ಹಾಗೂ ರಾಘವೇಶ್ವರಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಸಂಜನಾಗೆ ರಾಹುಲ್ ಪರಿಚಯವಾಗಿತ್ತು. ಕೊಲಂಬೊ ಹಾಗೂ ಗೋವಾದ ಕ್ಯಾಸಿನೊ ಮ್ಯಾನೇಜಿಂಗ್ ಡೈರೆಕ್ಟರ್ ಅಗಿರುವುದಾಗಿ ಹೇಳಿಕೊಂಡಿದ್ದ. ತಾನು ಹೇಳಿದ ಕಡೆಗಳಲ್ಲಿ ಹಣ ವಿನಿಯೋಗಿದರೆ ಹೆಚ್ಚು ಹಣ ಸಂಪಾದನೆ ಮಾಡಬಹುದು ಎಂದು ಮೂರು ವರ್ಷಗಳ ಹಿಂದೆ ಸಂಜನಾಗೆ ಆಶ್ವಾಸನೆ ನೀಡಿದ್ದನಂತೆ.
ಇದರಂತೆ ಮತ್ತಿಬ್ಬರು ಆರೋಪಿಗಳಾದ ರಾಮಕೃಷ್ಣ ಹಾಗೂ ರಾಘವೇಶ್ವರಿ ಬ್ಯಾಂಕ್ ಖಾತೆಗಳಿಗೆ ಸಂಜನಾರಿಂದ ಹಣ ಹಾಕಿಸಿದ್ದರು. ಹಣ ನೀಡಿ ಕೆಲ ವರ್ಷವಾದರೂ ಲಾಭಾಂಶ ನೀಡಿರಲಿಲ್ಲ. ಹಲವು ಬಾರಿ ಹಣ ಹಿಂತಿರುಗಿಸುವಂತೆ ಹೇಳಿದರೂ ಹಣ ನೀಡಿದೆ ಸತಾಯಿಸುತ್ತಿದ್ದರು. ತಾನು ಕೊಟ್ಟ ಹಣವನ್ನು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ ಲಾಭ ಗಳಿಸಿಕೊಂಡಿದ್ದಾರೆ. ಈ ಮೂಲಕ ನನ್ನ ಘನತೆಗೆ ಧಕ್ಕೆ ತರುವಂತೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ನ್ಯಾಯಾಲಯದಲ್ಲಿ ನಟಿ ಗಲ್ರಾನಿ ಪಿಸಿಆರ್ ದಾಖಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ 4ನೇ ಎಸಿಎಂಎಂ ನ್ಯಾಯಾಲಯ ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಈ ಆದೇಶದ ಮೇರೆಗೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ರಾಹುಲ್ ಸೇರಿ ಮೂವರ ವಿರುದ್ಧ ಐಪಿಸಿ ಸೆಕ್ಷನ್ 120ಬಿ, 107, 354, 406, 420, 506, 34ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಇದನ್ನೂ ಓದಿ:ಆರ್ಯನ್ ಖಾನ್ ಪ್ರಕರಣ: ಎನ್ಸಿಬಿ ವಿರುದ್ಧ ತನಿಖೆಗೆ ಆಗ್ರಹಿಸಿ ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ ಮುಖಂಡ