ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ನಂಟು ಆರೋಪ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ, ನನಗೆ ಅನಾರೋಗ್ಯವಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡಿ ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಕಾಡುತ್ತಿರುವ ಬೆನ್ನು ನೋವು: ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅನುಮತಿ ಕೋರಿದ ನಟಿ ರಾಗಿಣಿ - ಎನ್ಡಿಪಿಎಸ್ ನ್ಯಾಯಾಲಯಕ್ಕೆ ನಟಿ ರಾಗಿಣಿ ಅರ್ಜಿ
ಅನಾರೋಗ್ಯ ಕಾರಣ ನೀಡಿ ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ಜೈಲಿನಲ್ಲಿರುವ ನಟಿ ರಾಗಿಣಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾಳೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಆಕ್ಷೇಪಣೆ ಸಲ್ಲಿಸುವಂತೆ ಪಬ್ಲಿಕ್ ಪ್ರಾಸಿಕ್ಯೂಟರ್ಗೆ ನೋಟಿಸ್ ಜಾರಿ ಮಾಡಿದೆ.
ನಟಿ ರಾಗಿಣಿ ಪರ ವಕೀಲರು ಇಂದು ನಗರದ ಎನ್ಡಿಪಿಎಸ್ ವಿಶೇಷ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಸ್ಲಿಪ್ ಡಿಸ್ಕ್ ಸೇರಿದಂತ ಕೆಲ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಅಲ್ಲದೇ, ತಾಯಿ ಮತ್ತು ತಮ್ಮನ ಐಪಾಡ್ ಮತ್ತು ಪೆನ್ ಡ್ರೈವ್ ಹಿಂತಿರುಗಿಸಲು ಪೊಲೀಸರಿಗೆ ನಿರ್ದೇಶಿಸಬೇಕು. ವಕೀಲರು ಹಾಗೂ ಸಂಬಂಧಿಕರ ಭೇಟಿಗೆ ಅನುಮತಿ ನೀಡಬೇಕು ಎಂದು ನಟಿ ಮನವಿ ಮಾಡಿದ್ದಾರೆ.
ರಾಗಿಣಿ, ಈ ಹಿಂದೆಯೂ ಎಸಿಎಂಎಂ ನ್ಯಾಯಾಲಯಕ್ಕೂ ಇದೇ ಅರ್ಜಿ ಸಲ್ಲಿಸಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡುವಂತೆ ಕೋರಿದ್ದರು. ಆದರೆ, ನ್ಯಾಯಾಲಯ ಜೈಲಿನಲ್ಲಿರುವ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲು ಸೂಚಿಸಿತ್ತು. ಇದೀಗ ಜೈಲಿನ ಆಸ್ಪತ್ರೆಯಲ್ಲಿ ಸಮರ್ಪಕ ಚಿಕಿತ್ಸೆ ಲಭ್ಯವಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಹಾಗೂ ಚಿಕಿತ್ಸೆ ಪಡೆಯಲು ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ನಟಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶೀನಪ್ಪ ಅವರು, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಪ್ರಾಸಿಕ್ಯೂಷನ್ ಪರ ಹಾಜರಿದ್ದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ಗೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿದ್ದಾರೆ.