ಬೆಂಗಳೂರು: ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ಜಾಲ ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿಯನ್ನು ನಗರದ 1ನೇ ಎಸಿಎಂಎಂ ನ್ಯಾಯಾಲಯ ಮತ್ತೆ 5 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಿದೆ.
ಪ್ರಕರಣದಲ್ಲಿ ಜಾಮೀನು ಕೋರಿ ನಟಿ ರಾಗಿಣಿ ದ್ವಿವೇದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶ ಜಗದೀಶ್ ವಿಚಾರಣೆ ನಡೆಸಿದರು. ಈ ವೇಳೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ದ ಪೊಲೀಸರು ಹೆಚ್ಚಿನ ವಿಚಾರಣೆ ಹಿನ್ನೆಲೆ ಮತ್ತೆ ವಶಕ್ಕೆ ನೀಡುವಂತೆ ಕೋರಿದರು. ಸಿಸಿಬಿ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಮತ್ತೆ 5 ದಿನಗಳ ಕಾಲ ವಶಕ್ಕೆ ಒಪ್ಪಿಸಿದೆ.
ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡಿದ ರಾಗಿಣಿ ಪರ ವಕೀಲರು, ವಿಚಾರಣೆಗೆ ಸಹಕರಿಸುತ್ತೇವೆ, ರಾಗಿಣಿಗೆ ಆರೋಗ್ಯ ಸರಿಯಿಲ್ಲದಿರುವುದರಿಂದ ಅವರಿಗೆ ಜಾಮೀನು ನೀಡಬೇಕು ಎಂದು ಕೇಳಿಕೊಂಡರು. ಇದೇ ವೇಳೆ ಸಿಸಿಬಿ ಪರ ವಾದಿಸಿದ ವಕೀಲರು, ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಮುಖ್ಯವಾಗಿ ಆರೋಪಿ ನಟಿ ಡ್ರಗ್ಸ್ ಜಾಲದಲ್ಲಿ ಅಂತಾರಾಜ್ಯ ಸಂಪರ್ಕ ಹೊಂದಿರುವ ಶಂಕೆ ಇದೆ. ಹೀಗಾಗಿ ಹೆಚ್ಚಿನ ತನಿಖೆಗಾಗಿ 10 ದಿನಗಳ ಕಾಲ ಸಿಸಿಬಿ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದರು.
ತನಿಖಾಧಿಕಾರಿಗಳ ಮನವಿ ಪುರಸ್ಕರಿಸಿದ ನ್ಯಾಯಾಲಯ ನಟಿ ರಾಗಿಣಿ ದ್ವಿವೇದಿ ಅವರನ್ನು 5 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ನೀಡಿ ವಿಚಾರಣೆ ಮುಂದೂಡಿತು. ನಟಿ ರಾಗಿಣಿ ಬಂಧನಕ್ಕೂ ಮುನ್ನವೇ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯದ ವಿಚಾರಣೆಯನ್ನು ಸೋಮವಾರಕ್ಕೆ (ಇಂದಿಗೆ) ಮುಂದೂಡಿತ್ತು. ಆದರೆ, ಶುಕ್ರವಾರವೇ ರಾಗಿಣಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರಿಂದ ನಿರೀಕ್ಷಣಾ ಜಾಮೀನು ಅರ್ಜಿ ನಿಷ್ಪಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮೆಮೋ ಸಲ್ಲಿಸಿ ವಾಪಸ್ ಪಡೆದಿದ್ದ ನಟಿ ಪರ ವಕೀಲರು, ಬೆಳಗ್ಗೆ ಸಾಮಾನ್ಯ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.