ಕರ್ನಾಟಕ

karnataka

ETV Bharat / state

ಆಮ್‌ ಆದ್ಮಿ ಪಾರ್ಟಿಗೆ ಚಿತ್ರನಟಿ ಪೂಜಾ ರಮೇಶ್‌ ಸೇರ್ಪಡೆ - ಮುಖ್ಯಮಂತ್ರಿ ಚಂದ್ರು

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷ ಸೇರ್ಪಡೆ ಕಾರ್ಯಕ್ರಮಗಳು ಹೆಚ್ಚುತ್ತಿವೆ. ಚಿತ್ರನಟಿ ಡಾ.ಪೂಜಾ ರಮೇಶ್‌ ಅವರಿಂದು ಆಮ್‌ ಆದ್ಮಿ ಪಾರ್ಟಿ ಸೇರಿದ್ದಾರೆ.

Actress Pooja Ramesh joins Aam Aadmi Party
ಆಮ್‌ ಆದ್ಮಿ ಪಾರ್ಟಿಗೆ ಚಿತ್ರನಟಿ ಪೂಜಾ ರಮೇಶ್‌ ಸೇರ್ಪಡೆ

By

Published : Feb 3, 2023, 7:57 PM IST

ಆಮ್‌ ಆದ್ಮಿ ಪಾರ್ಟಿ ಸೇರಿದ ಪೂಜಾ ರಮೇಶ್‌

ಬೆಂಗಳೂರು: ಮಿಸ್‌ ಇಂಡಿಯಾ 2021ರಲ್ಲಿ ಕರ್ನಾಟಕ ಪ್ರತಿನಿಧಿಸಿದ್ದ ಚಿತ್ರನಟಿ ಹಾಗೂ ಸಮಾಜಸೇವಕಿ ಡಾ.ಪೂಜಾ ರಮೇಶ್‌ ಅವರಿಂದು ಆಮ್‌ ಆದ್ಮಿ ಪಾರ್ಟಿ ಸೇರಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, ಪ್ರಚಾರ ಹಾಗೂ ಜನಸಂಪರ್ಕ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹಾಗೂ ಪಕ್ಷದ ರಾಜ್ಯ ಕಾರ್ಯದರ್ಶಿ ಕುಶಲಸ್ವಾಮಿ ಅವರು ಪೂಜಾರನ್ನು ಪಕ್ಷಕ್ಕೆ ಬರಮಾಡಿಕೊಂಡರು. ರಾಜ್ಯ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಿತು.

ಪೃಥ್ವಿ ರೆಡ್ಡಿ ಮಾತನಾಡಿ, ಆಮ್‌ ಆದ್ಮಿ ಪಾರ್ಟಿಯು ಜನಾನುರಾಗಿ ಹಾಗೂ ಪ್ರಾಮಾಣಿಕ ಮನಸ್ಸುಗಳನ್ನು ಆಕರ್ಷಿಸುವುದರಲ್ಲಿ ಯಶಸ್ವಿಯಾಗುತ್ತಿದೆ. ಸಮಾಜದಲ್ಲಿ ಉತ್ತಮ ಬದಲಾವಣೆ ತರಬೇಕೆಂಬ ಇಚ್ಛೆ ಹೊಂದಿರುವ ಎಲ್ಲರಿಗೂ ಪಕ್ಷ ಒಂದು ವೇದಿಕೆಯಾಗಿದೆ. ಅಂಥವರು ಈ ಅವಕಾಶವನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಪಡಿಸಿಕೊಳ್ಳಬೇಕು. ಸಮಾಜದ ಬಗ್ಗೆ ಅಪಾರ ಕಾಳಜಿಯುಳ್ಳ ಪೂಜಾ ರಮೇಶ್‌ ಪಕ್ಷ ಸೇರ್ಪಡೆ ನಮ್ಮೆಲ್ಲರ ಉತ್ಸಾಹ ಹೆಚ್ಚಿಸಿದೆ ಎಂದರು.

ಮುಖ್ಯಮಂತ್ರಿ ಚಂದ್ರು ಮಾತನಾಡಿ, ಬೇರೆ ಪಕ್ಷಗಳು ಮಹಿಳಾ ಸಬಲೀಕರಣದ ಬಗ್ಗೆ ಕೇವಲ ಆಶ್ವಾಸನೆ ನೀಡುತ್ತಿವೆ. ಆಮ್‌ ಆದ್ಮಿ ಪಾರ್ಟಿಯು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರನ್ನು ಕಣಕ್ಕಿಳಿಸುವ ಮೂಲಕ ಅದನ್ನು ಸಾಕಾರಗೊಳಿಸುತ್ತಿದೆ. ಬೇರೆ ಪಕ್ಷಗಳಲ್ಲಿ ಮಹಿಳೆಯರನ್ನು ನಾಮಕಾವಸ್ಥೆಗೆ ಅಧಿಕಾರದಲ್ಲಿ ಕೂರಿಸಿ, ಅವರ ಹೆಸರಿನಲ್ಲಿ ಬೇರೆಯವರು ಅಧಿಕಾರ ನಡೆಸುವುದು ಸಾಮಾನ್ಯವಾಗಿದೆ. ಆದರೆ ಆಮ್‌ ಆದ್ಮಿ ಪಾರ್ಟಿ ಅದಕ್ಕೆ ಅವಕಾಶ ನೀಡದೆ ಡಾ.ಪೂಜಾ ರಮೇಶ್‌ರಂತಹ ಪ್ರಜ್ಞಾವಂತ ಮಹಿಳೆಯರಿಗೆ ಅವಕಾಶ ನೀಡಿ, ರಾಜಕೀಯದಲ್ಲಿ ಮುನ್ನೆಲೆಗೆ ತರಲಾಗುತ್ತಿದೆ ಎಂದು ಹೇಳಿದರು.

ಪೂಜಾ ರಮೇಶ್‌ ಅವರು ಕನ್ನಡ ಶಾಲೆಗಳ ಉಳಿವಿಗಾಗಿ ಉಡುಪಿ ಜಿಲ್ಲೆಯ ಹೆಬ್ರಿಯಿಂದ ರಾಜ್ಯಮಟ್ಟದ ಅಭಿಯಾನ ಆರಂಭಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಗರ್ಭಿಣಿಯರು ಹಾಗೂ ಮಕ್ಕಳಿಗೆ ಆಹಾರ ಪೂರೈಸಲು ಶ್ರಮಿಸಿದ್ದಾರೆ. ರಾಯಚೂರು ನಗರದಲ್ಲಿ ಚಿಂದಿ ಆಯುವ 200ಕ್ಕೂ ಹೆಚ್ಚು ಮಕ್ಕಳ ಕಲಾಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದ್ದರು. ಕೊರೊನಾ ಮಾಹಾಮಾರಿ ಮತ್ತು ಲಾಕ್‌ಡೌನ್‌ ಸಂದರ್ಭದಲ್ಲಿ ಚಿತ್ರರಂಗದ 300ಕ್ಕೂ ಹೆಚ್ಚು ಪೋಷಕ ಕಲಾವಿದರಿಗೆ ಆಹಾರ ಕಿಟ್‌ಗಳನ್ನು ವಿತರಿಸಿದ್ದರು. ಇವರಿಗೆ ಬೆಂಗಳೂರಿನಲ್ಲಿ ಮಹಿಳಾ ಸಾಧಕಿ ಪ್ರಶಸ್ತಿ, ವಾಸ್ಕೊದಲ್ಲಿ ಬಸವ ಪುರಸ್ಕಾರ, ರಾಯಚೂರಿನಲ್ಲಿ ಮದರ್‌ ಥೆರೆಸಾ ಪ್ರಶಸ್ತಿ, ಪಣಜಿಯಲ್ಲಿ ಭಾರತ ಗೌರವ ಪ್ರಶಸ್ತಿ, ತಮಿಳುನಾಡಿನಲ್ಲಿ ಗೌರವ ಡಾಕ್ಟರೇಟ್‌, ಕೊಡಗಿನಲ್ಲಿ ಕಾವೇರಿ ರತ್ನ, ಧಾರವಾಡದಲ್ಲಿ ಸನ್‌ಶೈನ್‌ ಪ್ರಶಸ್ತಿ ದೊರೆತಿದೆ.

ರಾಯಚೂರಿನಿಂದ ಸ್ಪರ್ಧೆ: ಡಾ.ಪೂಜಾ ರಮೇಶ್‌ ಮಾತನಾಡಿ, ನಾನು ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಎಎಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿ ಕ್ಷೇತ್ರದ ಜನರ ಸೇವೆ ಮಾಡಲು ಬಯಸಿದ್ದೇನೆ. ಸರ್ಕಾರಿ ಶಾಲೆಗಳು ಉಳಿಯಬೇಕು, ಬೆಳೆಯಬೇಕು ಎಂಬ ವಿಚಾರಕ್ಕೆ ಬದ್ಧಳಾಗಿರುವೆ. ಆಮ್‌ ಆದ್ಮಿ ಪಾರ್ಟಿ ಕೂಡ ಇದೇ ಸಿದ್ಧಾಂತವನ್ನು ದೆಹಲಿ ಹಾಗೂ ಪಂಜಾಬ್‌ನಲ್ಲಿ ಜಾರಿಗೆ ತಂದಿದೆ. ದೇಶದ ರಾಜಕೀಯದಲ್ಲಿ ಆಮ್ ಆದ್ಮಿ ಪಾರ್ಟಿಯು ಆಶಾಭಾವನೆ ಸೃಷ್ಟಿಸಿದೆ. ಬೇರೆಬೇರೆ ಪಕ್ಷಗಳ ನಿಷ್ಕ್ರಿಯತೆ ಹಾಗೂ ಭ್ರಷ್ಟಾಚಾರದಿಂದ ಬೇಸರಗೊಂಡು ರಾಜಕೀಯದಿಂದ ದೂರವಿದ್ದ ಜನರು ಆಮ್‌ ಆದ್ಮಿ ಪಾರ್ಟಿಯನ್ನೂ ನಿರೀಕ್ಷೆಯ ಕಣ್ಣುಗಳಿಂದ ನೋಡುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂಓದಿ:ರಾಜಕೀಯ ಪಕ್ಷಗಳ ಹಣಕಾಸು ನಿಯಂತ್ರಿಸುವ ಪ್ರಸ್ತಾವನೆ ಇಲ್ಲ: ಕೇಂದ್ರದ ಸ್ಪಷ್ಟನೆ

ABOUT THE AUTHOR

...view details