ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಕಾಯಿಲೆಯಿಂದ ನಿಧನರಾದರು. ಬೆಂಗಳೂರಿನ ನೆಲಮಂಗಲದ ಡಾ.ಬಿ.ಆರ್. ಅಂಬೇಡ್ಕರ್ ಮೈದಾನದಲ್ಲಿ ಇರಿಸಲಾಗಿರುವ ಹಿರಿಯ ನಟಿ ಲೀಲಾವತಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ನಟ, ನಟಿಯರು ಹಾಗೂ ಗಣ್ಯರು ಪಡೆದರು.
ನಟ ಉಪೇಂದ್ರ ನಟಿ ಲೀಲಾವತಿ ಅವರಿಗೆ ಅಂತಿಮ ನಮನ ಸಲ್ಲಿಸಿದರು. ಅಂತಿಮ ದರ್ಶನ ಪಡೆದ ಬಳಿಕ ವಿನೋದ್ ರಾಜ್ಗೆ ಸಾಂತ್ವನ ಹೇಳಿದರು. ನಟ ಕುಮಾರ್ ಗೋವಿಂದ, ಸಾಹಿತಿ ದೊಡ್ಡರಂಗೇಗೌಡ ಅವರು ಅಂತಿಮ ದರ್ಶನ ಪಡೆದುಕೊಂಡರು.
ನಟಿ ಲೀಲಾವತಿಗೆ ಕಿಚ್ಚ ಸುದೀಪ್, ಸೇರಿ ಹಲವರಿಂದ ಶ್ರದ್ಧಾಂಜಲಿ:ಹಿರಿಯ ನಟಿ ಲೀಲಾವತಿ ನಿಧನದ ಹಿನ್ನೆಲೆ ಕಿಚ್ಚ ಸುದೀಪ್ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ''ಮೇರು ನಟಿ ಲೀಲಾವತಿ ಅವರು ಇಹಲೋಕ ತ್ಯಜಿಸಿದ್ದಾರೆ. ಬಹು ಭಾಷಾ ತಾರೆಯಾಗಿದ್ದ ಅವರ ಕಲಾಸೇವೆ ಅನನ್ಯ. ಲೀಲಾವತಿ ಅಮ್ಮನ ನಿಧನಕ್ಕೆ ಕಂಬನಿ ಮಿಡಿಯುತ್ತೇನೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ'' ಎಂದು ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
''ಲೀಲಾವತಿ ಅಮ್ಮನವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ವಿನೋದ್ ರಾಜ್ ಅವರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ" ಎಂದು ನಿರ್ದೇಶಕ ಪ್ರೇಮ್ ಸಂತಾಪ ಸೂಚಿಸಿದ್ದಾರೆ.
''ಲೀಲಾವತಿ ಅಮ್ಮನವರ ಅಂತಿಮ ದರ್ಶನ ಪಡೆದೆ. ಅವರ ಪುತ್ರ ವಿನೋದ್ ರಾಜ್ ಸಿನಿಮಾದಲ್ಲಿ ಖಳನಟ ಪಾತ್ರಮಾಡಿದಾಗ ಜಗ್ಗೇಶ್ ನೀನು ಬೇಗ ನಾಯಕ ನಟನಾಗಿ ಅಭಿನಯಿಸಿ ಎಂದು ಹರಸಿದ ಅವರ ಮಾತುಗಳು ನೆನಪಾಯಿತು. ನಮ್ಮ ಹಿರಿಯರು ನಮ್ಮ ಆಸ್ತಿಯಾಗಿದ್ದಾರೆ'' ಎಂದು ಹೇಳಿದ ನವರಸ ನಾಯಕ ಜಗ್ಗೇಶ್ ಅವರು ಹಿರಿಯ ನಟಿಗೆ ಶ್ರದ್ಧಾಂಜಲಿ ಸಲ್ಲಿಕೆ ಮಾಡಿದ್ದಾರೆ. ಇದೇ ರೀತಿ ಹಲವು ನಟ, ನಟಿಯರು ಸಾಮಾಜಿಕ ಜಾಲತಾಣಗಳ ಮೂಲಕ ಹಿರಿಯ ನಟಿ ಲೀಲಾವತಿ ಅವರಿಗೆ ಸಂತಾಪ ಸೂಚಿಸಿದ್ದಾರೆ.
ಓದಿ: ಕೃಷಿ ಮೇಳಕ್ಕೆ ಬಂದ ಹಿರಿಯ ನಟಿ ಲೀಲಾವತಿ - ವಿನೋದ್ ರಾಜ್, ಖರೀದಿಸಿದ್ದೇನು?
ಇಂದು ಬೆಳಗ್ಗೆ 5.30ರಿಂದ 10.45 ರವರೆಗೂ ನೆಲಮಂಗಲದ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ, ಸಿಎಂ ಸಿದ್ದರಾಮಯ್ಯ ಹಾಗೂ ವಿನೋದ್ ರಾಜ್ ಅನುಮತಿ ಮೇರೆಗೆ ಬೆಳಗ್ಗೆ 11ರಿಂದ 2.30 ರವರೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಬಯಲು ರಂಗ ಮಂದಿರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ನಂತರ, ಮಧ್ಯಾಹ್ನ ಸಂಜೆ ಸೋಲದೇವನಹಳ್ಳಿಯಲ್ಲಿರುವ ಲೀಲಾವತಿ ಅವರ ತೋಟದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್ ಮಾಹಿತಿ ನೀಡಿದ್ದಾರೆ. ನೆಲಮಂಗಲದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪುತ್ರ ವಿನೋದ್ ರಾಜ್ ಸೇರಿದಂತೆ ಕುಟುಂಬದವರು ಸ್ಥಳದಲ್ಲಿ ಇದ್ದಾರೆ.
ಅಂತಿಮ ದರ್ಶನ ಪಡೆದ ವಿಧಾನಸಭೆ ಪ್ರತಿಪಕ್ಷ ನಾಯಕ: ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ನಟಿ ಲೀಲಾವತಿ ಅವರ ಅಂತಿಮ ದರ್ಶನ ಪಡೆದು, ಹಿರಿಯ ನಟಿಗೆ ನಮನ ಸಲ್ಲಿಕೆ ಮಾಡಿದರು.
''ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರ ನಿಧನದಿಂದ ಕನ್ನಡ ಸಿನಿಮಾ ಕ್ಷೇತ್ರವು ಅಮೂಲ್ಯ ರತ್ನವೊಂದನ್ನು ಕಳೆದು ಕೊಂಡಿದೆ. ನಟಿ ಲೀಲಾವತಿ ಅವರು ಸುಮಾರು 600ಕ್ಕೂ ಹೆಚ್ಚು ವಿವಿಧ ಭಾಷೆಯ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ತಾರೆ ಎನಿಸಿಕೊಂಡಿದ್ದರು. ಹಲವಾರು ಸಾಮಾಜಿಕ ಕಾರ್ಯ ಮಾಡುವ ಮೂಲಕ ಎಲ್ಲರಿಗೂ ಆದರ್ಶಪ್ರಾಯ ಆಗಿದ್ದರು. ಅವರ ನಿಧನದಿಂದ ಕನ್ನಡ ಸಿನಿಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಲೀಲಾವತಿಯವರ ಕುಟುಂಬ, ಅಭಿಮಾನಿಗಳಿಗೆ ಅವರ ಅಗಲುವಿಕೆ ದುಃಖವನ್ನು ಭರಿಸುವಂತಹ ಶಕ್ತಿಯನ್ನು ಭಗವಂತ ಕೊಡಲಿ ಎಂದು ಆರ್. ಅಶೋಕ್ ಸಂತಾಪ ಸೂಚಿಸಿದರು. ಹಿರಿಯ ನಟಿಯ ಅಗಲಿಕೆಗೆ ಸಿಎಂ, ಡಿಸಿಎಂ, ಸಿನಿತಾರೆಯರು, ಕಲಾವಿದರು ಹಾಗೂ ಹಲವು ಗಣ್ಯರು ಸಂತಾಪ ಸೂಚಿಸಿದರು.
ಇದನ್ನೂ ಓದಿ:ಹಿರಿಯ ನಟಿ ಲೀಲಾವತಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ