ಬೆಂಗಳೂರು:ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕಟೌಟ್ ಹಾಕುವಾಗ ವಿದ್ಯುತ್ ಶಾಕ್ ತಗುಲಿ ಮೂವರು ಮೃತಪಟ್ಟಿರುವುದರಿಂದ ಗದಗ ಜಿಲ್ಲೆಯ ಸೂರಣಗಿ ಗ್ರಾಮಕ್ಕೆ ರಾಕಿಂಗ್ ಸ್ಟಾರ್ ಯಶ್ ಭೇಟಿ ನೀಡಲಿದ್ದಾರೆ.
ಯಶ್ ಹುಟ್ಟುಹಬ್ಬದ ಕಟೌಟ್ ನಿಲ್ಲಿಸುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಮೂವರು ಯುವಕರು ಮೃತಪಟ್ಟ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿತ್ತು. ಹನುಮಂತ ಹರಿಜನ (21), ಮುರಳಿ ನಡುವಿನಮನಿ (20) ಹಾಗೂ ನವೀನ್ ಗಾಜಿ (19) ಎಂಬುವರು ವಿದ್ಯುತ್ ಶಾಕ್ನಿಂದ ಸಾವನ್ನಪ್ಪಿದ್ದರು. ಅಲ್ಲದೆ, ಈ ವೇಳೆ ಅಲ್ಲೇ ನಿಂತುಕೊಂಡಿದ್ದ ಮಂಜುನಾಥ್ ಹರಿಜನ, ದೀಪಕ್ ಹರಿಜನ ಹಾಗೂ ಪ್ರಕಾಶ್ ಮ್ಯಾಗೇರಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಮೂವರ ಅಂತ್ಯಕ್ರಿಯೆಯನ್ನು ಗ್ರಾಮದಲ್ಲಿ ನೆರವೇರಿಸಲಾಗಿದೆ.
ಅಭಿಮಾನಿಗಳು ಮೃತಪಟ್ಟ ಹಿನ್ನೆಲೆಯಲ್ಲಿ ಯಶ್ ಅವರು ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ. ಗೋವಾದಿಂದ ನಟ ಯಶ್ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದರು. ಬಳಿಕ ಅಲ್ಲಿಂದ ನೇರವಾಗಿ ಕಾರಿನಲ್ಲಿ ಗದಗದ ಸೂರಣಗಿ ಗ್ರಾಮದತ್ತ ತೆರಳಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನೂರಾರು ಅಭಿಮಾನಿಗಳು ಅವರಿಗಾಗಿ ಕಾಯುತ್ತಿದ್ದರು.