ದೇವನಹಳ್ಳಿ :ರಾಜ್ಯದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಕೂಗು ಕೇಳಿ ಬರುತ್ತಿದೆ. ಇದೇ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಹಿಂದಿ ಹೇರಿಕೆಯ ಬದಲಿಗೆ ನಮ್ಮ ಕನ್ನಡ ಭಾಷೆಗೆ ಸರಿ ಸಮಾನವಾದ ಸ್ಥಾನಕ್ಕೆ ಅಭಿಯಾನ ಮಾಡಬೇಕಿದೆ ಎಂದರು.
ದೇವನಹಳ್ಳಿ ತಾಲೂಕಿನ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿನ ಸಭಾಂಗಣದಲ್ಲಿ ನಡೆದ ಜಿಲ್ಲಾ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯ ನಂತರ ಮಾಧ್ಯಮದೊಂದಿಗೆ ರಾಜ್ಯದಲ್ಲಿ ಹಿಂದಿ ಹೇರಿಕೆ ಬಗ್ಗೆ ಮಾತನಾಡುತ್ತಾ, 1953ರ ನಂತರ ಸವಿಂಧಾನದ ಕಲಂ 343 ರಿಂದ 350ರವರೆಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನ ಇಡೀ ಭಾರತ ಆಡಳಿತ ಭಾಷೆ ಎಂದು ಒಪ್ಪಿಕೊಂಡಿದೆ. ಆದರೆ 8ನೇ ಪರಿಚ್ಛೇದದಲ್ಲಿರುವ 22 ಭಾಷೆಗಳು ಏನು, ಭಾಷವಾರು ಪ್ರಾಂತ್ಯಗಳ ವಿಂಗಡನೆಯಾದಾಗ ಪ್ರಾದೇಶಿಕ ಭಾಷೆಗಳಿಗೆ ಇಂಗ್ಲಿಷ್ ಮತ್ತು ಹಿಂದಿಯಷ್ಟೇ ಸರಿ ಸಮಾನವಾದ ಸ್ಥಾನ ಕೊಡ ಬೇಕಿತ್ತು. ಈ ಮೂಲ ಕಾರಣ ಸರಿಯಾದ್ರೆ ಸಮಸ್ಯೆ ಬಗೆಹರಿಯುತ್ತೆ. ಹಿಂದಿ ಹೇರಿಕೆ ಪದಕ್ಕಿಂತ ನಮ್ಮ ಭಾಷೆಗೂ ಸರಿ ಸಮಾನವಾದ ಸ್ಥಾನ ಕೊಡಬೇಕೆಂಬ ಅಭಿಯಾನ ಮಾಡಬೇಕಿದೆ. ಅದು ಸಂವಿಧಾನ ಮೂಲಕವೇ ಸಾಧ್ಯವಾಗುವುದು ಎಂದರು.