ಬೆಂಗಳೂರು:ಪರಿಸರ ಸಂರಕ್ಷಣೆಗಾಗಿ ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ತಳಮಟ್ಟದಿಂದ ಕಾರ್ಯ ನಿರ್ವಹಿಸುತ್ತಿರುವ ಭಾರತದ ಏಕೋಪಾಸ್ ಪ್ರತಿನಿಧಿಯಾಗಿ ನಾನು ವಿಶ್ವಸಂಸ್ಥೆಗೆ ಬಂದಿದ್ದೇನೆ. ಪರಿಸರ ಸುಸ್ಥಿರತೆ ಕಾಪಾಡುವುದು ಸದ್ಯದ ಅಗತ್ಯ. ಒಬ್ಬ ನಟ, ನಿರ್ದೇಶಕನಾಗಿ ತಳಮಟ್ಟದಲ್ಲಿ ಪರಿಣಾಮ ಬೀರಬೇಕು ಎಂಬುದು ನನ್ನ ಉದ್ದೇವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ರಿಷಬ್ ಶೆಟ್ಟಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ವಿಶ್ವದ ಹಲವು ದೇಶದ ಪ್ರತಿನಿಧಿಗಳ ಮುಂದೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕನ್ನಡದಲ್ಲೇ ನಮ್ಮ ಪರಿಸರ ಮತ್ತು ಅರಣ್ಯದಂಚಿನಲ್ಲಿರೋ ಜನರ ಸಮಸ್ಯೆಗಳ ಬಗ್ಗೆ ಮಾತನಾಡುವ ಮೂಲಕ ಭಾಷಾ ಅಭಿಮಾನ ಮೆರೆದಿದ್ದಾರೆ. ಈ ಮೂಲಕ ಕನ್ನಡದಲ್ಲಿ ಭಾಷಣ ಮಾಡಿದ ಮೊದಲ ಕನ್ನಡಿಗ ಎಂಬ ಕೀರ್ತಿಗೂ ರಿಷಬ್ ಶೆಟ್ಟಿ ಪಾತ್ರರಾಗಿದ್ದಾರೆ. ವಿಶ್ವಸಂಸ್ಥೆಯಲ್ಲಿ ರಿಷಬ್ ಶೆಟ್ಟಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಕೂಡಾ ಆಗುತ್ತಿದೆ. ಇಂದು ವಿಶ್ವಸಂಸ್ಥೆಯಲ್ಲಿ ಕನ್ನಡದ ದನಿ ಸದ್ದು ಮಾಡಿ ಗಮನ ಸೆಳೆದಿರುವುದು ವಿಶೇಷ.
ಕಾಂತಾರ ಸಿನಿಮಾದಿಂದ ಭಾರತೀಯ ಚಿತ್ರರಂಗ ಅಲ್ಲದೇ ವಿಶ್ವದ್ಯಾಂತ ಗಮನ ಸೆಳೆದ ನಟ ರಿಷಬ್ ಶೆಟ್ಟಿ. ದಕ್ಷಿಣ ಕನ್ನಡದಲ್ಲಿ ದೈವರಾಧನೆ, ಭೂತಕೋಲ ಹಾಗೂ ಮನುಷ್ಯ ಮತ್ತು ಪ್ರಕೃತಿ ಸಂಘರ್ಷಗಳ ಕಥೆ ಆಧರಿಸಿ ಬಂದ ಕಾಂತಾರ ಚಿತ್ರದಲ್ಲಿ ನಟಿಸಿ ನಂತರ ನಿರ್ದೇಶನ ಮಾಡಿದರು. ಈ ಸಿನಿಮಾದ ಬಗ್ಗೆ ಕನ್ನಡ ಚಿತ್ರರಂಗ ಸೇರಿ ಇಡೀ ವಿಶ್ವವೇ ಮಾತನಾಡುವ ಹಾಗೆ ಮಾಡಿತ್ತು. 15 ಕೋಟಿ ಬಜೆಟ್ ನಿರ್ಮಾಣದ ಮೂಲಕ ನಿರ್ಮಾಣವಾದ ಕಾಂತಾರ ಚಿತ್ರ ಬರೋಬ್ಬರಿ 400 ಕೋಟಿ ಅಧಿಕ ಬಾಕ್ಸ್ ಆಫೀಸ್ನಲ್ಲಿ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಬರೆದು ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಡಿವೈನ್ಸ್ಟಾರ್ನನ್ನಾಗಿ ಮಾಡಿತ್ತು.
ಇದನ್ನೂ ಓದಿ :ನಾಟು ನಾಟು ಸಾಧನೆಗೆ ಅಮೆರಿಕನ್ ಗಾಯಕ ಪ್ರಶಂಸೆ: ಭಾವುಕರಾದ ಕೀರವಾಣಿ, RRR ತಂಡ
ವಿಶ್ವಾದ್ಯಂತ ಬಹು ಭಾಷೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಕನ್ನಡ ಚಲನಚಿತ್ರ ಕಾಂತಾರ ವಿಶ್ವಸಂಸ್ಥೆಯ ಜಿನೀವಾದಲ್ಲಿ ಮಾರ್ಚ್ 17 ರಂದು ಹಾಲ್ ಸಂಖ್ಯೆ 13 ನಲ್ಲಿರುವ ಪಾಥೆ ಬಾಲೆಕ್ಸರ್ಟ್‌ನಲ್ಲಿ ಪ್ರದರ್ಶನಗೊಳ್ಳಲು ಸಿದ್ಧವಾಗಿದೆ. ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಈಗಾಗಲೇ ಜಿನೀವಾ ತಲುಪಿದ್ದು, ಮೌಖಿಕ ಸಲ್ಲಿಕೆ ಪೂರ್ಣಗೊಳಿಸಿದ್ದಾರೆ.