ಬೆಂಗಳೂರು: ರಾಜಕೀಯ ರಂಗ ಪ್ರವೇಶ ಮಾಡಿರುವ ಬಹುಭಾಷಾ ನಟ ಪ್ರಕಾಶ್ ರೈ ಬಣ್ಣದ ಬದುಕಿಗೆ ವಿದಾಯ ಹೇಳಲು ಮುಂದಾಗಿದ್ದಾರೆ. ನಾನು ಪ್ರಬುದ್ಧನಾಗಿದ್ದೇನೆ, ಇನ್ನು ನನ್ನಿಂದ ನಟನೆ ಸಾಧ್ಯವಿಲ್ಲ ಎನ್ನುವ ಮೂಲಕ ಚಿತ್ರರಂಗಕ್ಕೆ ಗುಡ್ ಬೈ ಹೇಳುವ ಸುಳಿವು ನೀಡಿದ್ದಾರೆ.
ಹೌದು, ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿರುವ ನಟ ಪ್ರಕಾಶ್ ರೈ ಇದೀಗ ತಮ್ಮ ಅಚ್ಚು ಮೆಚ್ಚಿನ ಬಣ್ಣದ ಜಗತ್ತಿಗೆ ವಿದಾಯ ಹೇಳಲು ಮುಂದಾಗಿರುವ ಸುಳಿವ ನೀಡಿ ಅಭಿಮಾನಿಗಳಿಗೆ ಶಾಕ್ ನೀಡುತ್ತಿದ್ದಾರೆ.
ಪ್ರೆಸ್ಕ್ಲಬ್ನಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇನ್ಮುಂದೆ ಚಿತ್ರರಂಗದಲ್ಲಿ ಕೆಲಸ ಮಾಡಲ್ಲ. ಕೆಲಸ ಮಾಡುವ ಮನಸ್ಸಿಲ್ಲ. ಇತ್ತೀಚಿನ ದಿನಗಳಲ್ಲಿ ಎತ್ತೋ ಗಾಡಿ, ವಿಲನ್ಗೆ ಹೊಡಿತಿನಿ ಅನ್ನೋ ಡೈಲಾಗ್ ನನಗೇ ನಗು ತರಿಸುತ್ತಿದೆ. ನನ್ನ ವಿಷನ್ ಅದಲ್ಲ. ನನಗೆ 54 ವರ್ಷ ಆಯಿತು. ನಾನು ಪ್ರಬುದ್ಧನಾಗಿದ್ದೇನೆ. ಇನ್ನು ನನ್ನಿಂದ ನಟನೆ ಮಾಡಲು ಆಗಲ್ಲ ಎನ್ನುವ ಮೂಲಕ ಸದ್ಯದಲ್ಲೇ ಚಿತ್ರರಂಗಕ್ಕೆ ವಿದಾಯ ಹೇಳುವ ಸುಳಿವು ನೀಡಿದರು.
ಬಹುಭಾಷಾ ನಟ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರೈ ನನ್ನ ಆಲೋಚನೆಗಳು ಬದಲಾಗಿವೆ. ಕುಡಿಯುವ ನೀರಿನ ಸಮಸ್ಯೆ, ರೈತರ ಸಮಸ್ಯೆ, ಟ್ರಾಫಿಕ್ ಸಮಸ್ಯೆ, ಸ್ಲಂ ಅಭಿವೃದ್ಧಿ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ಬಡವರ ಪರ ಹೇಗೆ ಹೋರಾಟ ನಡೆಸಬೇಕು, ಸೋಲಾರ್ ಹೇಗೆ ತರಬೇಕು... ಹೀಗೆ ಜನರ ಕಲ್ಯಾಣದ ಕುರಿತು ಯೋಚನೆ ಮಾಡುತ್ತಿದ್ದೇನೆ. 75 ವರ್ಷ ಬದುಕಬೇಕು ಅಂತಾ ಆಸೆ ಇದೆ. ವಯಸ್ಸಿನ ಕಾರಣದಿಂದ 15 ವರ್ಷದಲ್ಲಿ ಯುವಕರನ್ನು ಬೆಳೆಸಿ ನಂತರ 65 ವರ್ಷದಷ್ಟರ ವೇಳೆಗೆ ರಾಜಕಾರಣದಿಂದ ವಾಪಸ್ ಬರಬೇಕು. ಅದರಲ್ಲಿ ಒಂದೈದು ವರ್ಷ ಓದಬೇಕು ಎಂದುಕೊಂಡಿದ್ದೇನೆ. ಗೌರಿ ಸಾಯದೇ ಇದ್ದರೆ ಬೇರೆ ಪ್ರಕಾಶ್ ರೈನನ್ನು ನೋಡುತ್ತಿದ್ದಿರಿ ಎನ್ನುವ ಮೂಲಕ ತಮ್ಮ ಭವಿಷ್ಯದ ನಡೆಯ ಬಗ್ಗೆ ವಿಸ್ತಾರವಾದ ಮಾಹಿತಿ ನೀಡಿದರು.
ನಿಖಿಲ್ಗಿಂತ ಸುಮಲತಾ ಬೆಸ್ಟ್!
ಜೆಡಿಎಸ್ ಪಕ್ಷಕ್ಕೆ ತುಂಬಾ ಕೆಲಸ ಮಾಡಿದ, ಸಂಸತ್ನಲ್ಲಿ ಸಮರ್ಥವಾಗಿ ಮಾತನಾಡಬಲ್ಲ ಅನುಭವಿ ರಾಜಕಾರಣಿ ಅಭ್ಯರ್ಥಿ ಆಗಿದ್ದರೆ ಸುಮಲತಾ ಪರ ನಿಲ್ಲಲು ಸಾಧ್ಯವಿರುತ್ತಿರಲಿಲ್ಲ. ಆದರೆ, ಇಲ್ಲಿ ಸುಮಲತಾ ಅವರಿಗೆ ರಾಜಕೀಯದ ಬಗ್ಗೆ ಗೊತ್ತಿದೆ. ತುಂಬಾ ಸ್ಪಷ್ಟವಾದ ನಿಲುವುಗಳಿವೆ. ಹಾಗಾಗಿ ನಿಖಿಲ್ ಮತ್ತು ಸುಮಲತಾ ನೋಡಿದಾಗ ಸುಮಲತಾ ಉತ್ತಮ ಅಭ್ಯರ್ಥಿ ಎಂದರು.
ಯಾವುದೇ ಪಕ್ಷವಾದರೂ ಸರಿ ಅರ್ಹರಿಗೆ ಟಿಕೆಟ್ ನೀಡಿದರೆ ಕುಟುಂಬ ರಾಜಕಾರಣ ಆಗುವುದಿಲ್ಲ. ಆದರೆ, ಅರ್ಹ ಅಲ್ಲದಿದ್ದರೆ ಅದು ಕುಟುಂಬ ರಾಜಕಾರಣವಾಗಲಿದೆ ಎಂದು ಕುಮಾರಸ್ವಾಮಿ ಪುತ್ರ ನಿಖಿಲ್ ರಾಜಕೀಯ ಪ್ರವೇಶಕ್ಕೆ ತಮ್ಮದೇ ರೀತಿಯಲ್ಲಿ ಪ್ರಕಾಶ್ ರೈ ವ್ಯಾಖ್ಯಾನ ಮಾಡಿದರು.