ಬೆಂಗಳೂರು: ತಮ್ಮ ಕಾರು ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿರುವುದರ ಕುರಿತು ನಟ ನಾಗಭೂಷಣ ವಿಷಾದ ವ್ಯಕ್ತಪಡಿಸಿದರು. 'ಅಪರಿಚಿತ ಚಾಲಕ ಎಸಗಿದ ಅಪಘಾತದಲ್ಲಿ ನಾನು ತಂದೆಯನ್ನು ಕಳೆದುಕೊಂಡಿರುವೆ. ಇನ್ನೂ ಆ ಅಪಘಾತ ಎಸಗಿದ ಚಾಲಕ ಯಾರೂ ಎನ್ನುವುದು ಸಹ ಗೊತ್ತಾಗಿಲ್ಲ. ಇನ್ನು ಇಲ್ಲಿ ಹೇಗೆ ಮೃತರ ಕುಟುಂಬದವರ ಮುಂದೆ ಹೋಗಿ ನಿಲ್ಲಲಿ? ಎಂದು ನಟ ಭಾವುಕರಾದರು.
ಮಾಧ್ಯಮಗೋಷ್ಟಿಯಲ್ಲಿ ಅವಘಡದ ಕುರಿತು ಮೊದಲ ಬಾರಿಗೆ ಮಾತನಾಡಿದ ನಾಗಭೂಷಣ್, 'ಬಹಳಷ್ಟು ಜನ ಅಪಘಾತದ ಕುರಿತು, ಆ ದಿನ ಏನಾಯ್ತು ಎಂದು ನನ್ನ ಕಡೆಯಿಂದ ಸ್ಪಷ್ಟನೆ ಕೇಳಿದ್ದೀರಿ. ನಾನು ಮೊದಲೇ ನಿಮ್ಮ ಮುಂದೆ ಬಂದು ಮಾತನಾಡಬೇಕಿತ್ತು. ಆದರೆ ಮಾನಸಿಕವಾಗಿ ಸಾಕಷ್ಟು ಕುಗ್ಗಿ ಹೋಗಿದ್ದರಿಂದ ಮಾತನಾಡಲು ಸಾಧ್ಯವಾಗಿರಲಿಲ್ಲ' ಎಂದರು.
ಹಿಟ್ & ರನ್ ಅಲ್ಲ, ನಾನೇ ಆಸ್ಪತ್ರೆಗೆ ದಾಖಲಿಸಿದ್ದೆ: ಅಪಘಾತದ ದಿನ ನಾನೇ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದೇನೆ. ಆ ದಿನ ಅಪಘಾತದ ರಭಸಕ್ಕೆ ನನ್ನ ಕಾರಿನ ಬಂಪರ್ ಕಿತ್ತು ಹೋಗಿದ್ದಲ್ಲ, ಜಖಂಗೊಂಡಿದ್ದ ಕಾರಿನ ಬಂಪರ್ ಕಿತ್ತು ಹಾಕಿ, ಅವರನ್ನು ಕಾರಲ್ಲಿ ಕರೆದೊಯ್ಯಲು ಯತ್ನಿಸಿದೆ. ಆದ್ರೆ ಸಾಧ್ಯವಾಗಲಿಲ್ಲ. ನಂತರ ಆಟೋದಲ್ಲಿ ಗಾಯಾಳುಗಳನ್ನ ಆಸ್ಪತ್ರೆಗೆ ಕರೆದೊಯ್ದೆ. ಮಾರ್ಗ ಮಧ್ಯದಲ್ಲಿ ನಾನೇ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಆದರೆ ಆ ಮಹಿಳೆ ಮೃತಪಟ್ಟಿದ್ದಾರೆ ಎಂದು ಕೇಳಿದಾಗ ಆ ಕ್ಷಣ ನಾನೇ ಕುಸಿದು ಹೋಗಿದ್ದೆ. ನಂತರ ಪೊಲೀಸರು ಬಂದು ಕಾನೂನಾತ್ಮಕವಾಗಿ ಏನು ಮಾಡಬೇಕೋ ಅದನ್ನ ಮಾಡಿದರು, ಬೆಳಗ್ಗೆ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು ಎಂದು ಆ ದಿನದ ಘಟನೆಯನ್ನು ವಿವರಿಸಿದರು.
ತಂದೆಯನ್ನ ಅಪಘಾತದಲ್ಲಿ ಕಳೆದುಕೊಂಡ ನನಗೆ ಆ ನೋವಿನ ಅರಿವಿದೆ: ಅಪಘಾತದ ಬಳಿಕ ಆ ಕ್ಷಣದಲ್ಲಿ ಒಬ್ಬ ಮನುಷ್ಯನಾಗಿ ನಾನು ಏನು ಮಾಡಲು ಸಾಧ್ಯ ಅದೆಲ್ಲವನ್ನ ಮಾಡಿದ್ದೀನಿ. ಯಾಕಂದರೆ ಆ ನೋವು ಏನು ಎಂಬುದು ನನಗೆ ಗೊತ್ತು. ನಾನೂ ಸಹ ನನ್ನ ತಂದೆಯನ್ನ ನಾನು ಅಪಘಾತದಲ್ಲಿ ಕಳೆದುಕೊಂಡೆ. ಆ ಪರಿಸ್ಥಿತಿ ಅನುಭವಿಸಿರುವುದರಿಂದ ಈ ನೋವಿನಲ್ಲಿ ಮೃತರ ಕುಟುಂಬದ ಜೊತೆ ಇದ್ದೇನೆ ಎಂದರು.