ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗು ಅವರು ಸೂಚಿಸುವ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಕಾರ್ಯ ನಡೆಸುವುದಾಗಿ ಪ್ರಕಟಿಸಿರುವ ನಟ ಕಿಚ್ಚ ಸುದೀಪ್ ನಾಳೆ ಅಧಿಕೃತವಾಗಿ ಸಿಎಂ ಸೂಚಿಸಿರುವ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ವೇಳೆ ಸಾಂಕೇತಿಕವಾಗಿ ಭಾಗಿಯಾಗಿ ಬೆಂಬಲ ಸೂಚಿಸಿ ಪ್ರಚಾರ ನಡೆಸಿದ್ದ ಸುದೀಪ್ ನಾಳೆಯಿಂದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯ ನಡೆಸಲಿದ್ದಾರೆ.
ನಟ ಕಿಚ್ಚ ಸುದೀಪ್ ಪ್ರಚಾರ ಕಾರ್ಯದ ವಿವರವನ್ನು ಬಿಡುಗಡೆ ಮಾಡಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆಯಂತೆ ಒಂದು ದಿನದ ಪ್ರಚಾರ ಕಾರ್ಯದ ವಿವರಗಳನ್ನು ಬಹಿರಂಪಡಿಸಲಾಗಿದೆ. ನಾಳೆ ಮೊಳಕಾಲ್ಮೂರಿನ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ರೋಡ್ ಶೋ ಮೂಲಕ ಮತಯಾಚನೆ ಮಾಡಲಿರುವ ಸುದೀಪ್, ಜಗಳೂರು ಬಿಜೆಪಿ ಅಭ್ಯರ್ಥಿ ಪರ ಸುದೀಪ್ ಪ್ರಚಾರ ನಡೆಸಿ, ಮಾಯಕೊಂಡ ಬಿಜೆಪಿ ಅಭ್ಯರ್ಥಿ ಪರ ಮತ ಯಾಚಿಸಲಿದ್ದಾರೆ. ದಾವಣಗೆರೆ ಉತ್ತರ ಮತ್ತು ದಕ್ಷಿಣ ಅಭ್ಯರ್ಥಿಗಳ ಪರ ಪ್ರಚಾರದ ಬಳಿಕ ಸಂಡೂರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಕಾರ್ಯ ನಡೆಸಲಿದ್ದಾರೆ. ನಾಳೆ ಒಂದೇ ದಿನದಲ್ಲಿ ಒಟ್ಟು ಐದು ಕಡೆ ರೋಡ್ ಶೋ ಮೂಲಕ ಕ್ಯಾಂಪೇನ್ ಮಾಡಲಿದ್ದಾರೆ.
ಬುಧವಾರ ಬೆಳಗ್ಗೆ 10.55 ರಿಂದ 11.40 ರವರೆಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ ನಟ ಸುದೀಪ್ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ ಪರ ಮತ ಯಾಚನೆ ಮಾಡಲಿದ್ದಾರೆ. ನಂತರ ದಾವಣಗೆರೆ ಜಿಲ್ಲೆ ಜಗಳೂರಿಗೆ ತೆರಳಲಿರುವ ಅವರು ಮಧ್ಯಾಹ್ನ 12.30 ರಿಂದ 1.15 ರವರೆಗೆ ಮೂರು ಕಿಲೋಮೀಟರ್ ರೋಡ್ ಶೋ ನಡೆಸಲಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ ರಾಮಚಂದ್ರ ಪರ ಮತಯಾಚನೆ ಮಾಡಲಿದ್ದಾರೆ.