ಕರ್ನಾಟಕ

karnataka

ETV Bharat / state

ರಾಜಧಾನಿಯಲ್ಲಿ ಮಳೆ ಅವಾಂತರ: ಮಳೆ ನೀರಲ್ಲಿ ಮುಳುಗಿದ ಜಗ್ಗೇಶ್​ BMW ಕಾರು

ಕಳೆದ ದಿನ ರಾಜ್ಯದ ವಿವಿಧೆಡೆ ಭಾರಿ ಗಾಳಿ ಸಹಿತ ಮಳೆ ಸುರಿದಿದ್ದು, ಅನೇಕ ಅವಾಂತರಗಳು ಸೃಷ್ಟಿಯಾಗಿವೆ.

actor-jaggesh-car-drowned-in-bengaluru-rain-water
ರಾಜಧಾನಿಯಲ್ಲಿ ಮಳೆ ಅವಾಂತರ: ಮಳೆ ನೀರಲ್ಲಿ ಮುಳುಗಿದ ಜಗ್ಗೇಶ್​ BMW ಕಾರು

By

Published : May 22, 2023, 4:04 PM IST

ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದ ‌ಹಿನ್ನೆಲೆಯಲ್ಲಿ ನಿನ್ನೆ (ಭಾನುವಾರ) ನಗರದಲ್ಲಿ ಆಲಿಕಲ್ಲು ಮಳೆ ಸುರಿದಿದ್ದು, ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಮಳೆ ರಭಸಕ್ಕೆ ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್​​ ಅವರ ಕಾರು ಕೂಡ ನೀರಿನಲ್ಲಿ ಮುಳುಗಡೆಯಾಗಿದೆ.

ಈ ಕುರಿತು ಟ್ವೀಟರ್​​ ಮೂಲಕ ಫೋಟೋ, ವಿಡಿಯೋ ಹಂಚಿಕೊಂಡಿರುವ ಅವರು, "ನನ್ನ ಮನೆಯ ರಿಪೇರಿ ಕಾರ್ಯ ಪ್ರಯುಕ್ತ ನನ್ನ ಸ್ನೇಹಿತ ಮುರಳಿ ಮನೆಯ ಸೆಲ್ಲಾರ್​ನಲ್ಲಿ ನಿಲ್ಲಿಸಿದ್ದ BMW5 ಕಾರು ಅಕಾಲಿಕ ಮಳೆ ನೀರಿನಲ್ಲಿ ಮುಳುಗಡೆ ಆಯಿತು. 5hp motor ಬಳಸಿ ನೀರು ಹೊರ ಹಾಕಿಸಲಾಯಿತು. ಇಂಥ ಆಲಿಕಲ್ಲಿನ ಮಳೆ ಈ ತಿಂಗಳಲ್ಲಿ ಬಂದದ್ದು ಆಶ್ಚರ್ಯ" ಎಂದು ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್​ ಬರೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಆಂಧ್ರ ಯುವತಿ ಸಾವು: ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಆಗಮಿಸಿದ್ದ ಯುವತಿ ಮತ್ತು ಅವರ ಕುಟುಂಬ ಇಲ್ಲಿನ ಕಬನ್ ಪಾರ್ಕ್​ ನೋಡಿಕೊಂಡು ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಮಳೆ ಬಂದ ಪರಿಣಾಮ ಕೆ. ಆರ್. ಸರ್ಕಲ್ ಬಳಿಯ ಅಂಡರ್ ಪಾಸ್​​ನಲ್ಲಿ ತೆರಳುತ್ತಿದ್ದಾಗ ಏಕಾಏಕಿ ನೀರು ತುಂಬಿ ಕಾರು ಮುಳುಗಡೆಯಾಯಿತು. ಕಾರಿನಲ್ಲಿ ಚಾಲಕ ಸೇರಿ ಒಟ್ಟು ಆರು ಜನರಿದ್ದರು.

ತಕ್ಷಣ ಸ್ಥಳೀಯರು, ಪೊಲೀಸರು ಕಾರಿನಲ್ಲಿದ್ದವರ ರಕ್ಷಣೆಗೆ ಧಾವಿಸಿದ್ದು, ಹರಸಾಹಸಪಟ್ಟು ಆರು ಜನರನ್ನು ರಕ್ಷಿಸಿದ್ದರು. ಅವರಲ್ಲಿ ಓರ್ವ ಯುವತಿ ತೀವ್ರ ಅಸ್ವಸ್ಥಗೊಂಡಿದ್ದರಿಂದ ತಕ್ಷಣ ನೃಪತುಂಗ ರಸ್ತೆಯ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಸ್ಪತ್ರೆಗೆ ರವಾನಿಸುವ ಮುನ್ನವೇ ಯುವತಿ ಸಾವನ್ನಪ್ಪಿದ್ದಳು ಎಂದು ವೈದ್ಯರು ದೃಢಪಡಿಸಿದ್ದಾರೆ.

ರಾಜಧಾನಿಯಲ್ಲಿ ಮಳೆ ಅವಾಂತರ

ಕೇವಲ ಒಂದು ಗಂಟೆ ಮಳೆಗೆ ನಲುಗಿದ ರಾಜಧಾನಿ:ನಿನ್ನೆಮಧ್ಯಾಹ್ನ 3 ಗಂಟೆಯಿಂದ ಪ್ರಾರಂಭವಾದ ಮಳೆ ಸುಮಾರು ಒಂದು ಗಂಟೆ ಕಾಲ ಧಾರಾಕಾರವಾಗಿ ಸುರಿಯಿತು ಈ ವೇಳೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಗುಡುಗು - ಸಿಡಿಲು ಸಹಿತ ಮಳೆ ಅಬ್ಬರಿಸಿತು. ಈ ಮಳೆಯಿಂದಾಗಿ ನಗರದ ವಿಧಾನಸೌಧ, ಆನಂದ್ ರಾವ್, ಮೆಜೆಸ್ಟಿಕ್, ರೇಸ್ ಕೋರ್ಸ್, ಕೆಆರ್ ಸರ್ಕಲ್, ಟೌನ್ ಹಾಲ್, ಕಾರ್ಪೊರೇಷನ್, ಮೈಸೂರು ಬ್ಯಾಂಕ್ ಸರ್ಕಲ್, ಜಯನಗರ, ಮಲ್ಲೇಶ್ವರ ಸೇರಿ ಹಲವೆಡೆ ವಾಹನ ಸವಾರರು ದಾರಿ ಕಾಣದೆ ರಸ್ತೆಯ ಪಕ್ಕದಲ್ಲಿ ವಾಹನಗಳನ್ನು ನಿಲ್ಲಿಸುವ ಅನಿವಾರ್ಯತೆ ಸೃಷ್ಟಿಯಾಯಿತು.

ರಾಜಧಾನಿಯಲ್ಲಿ ಮಳೆ ಅವಾಂತರ

ಧರೆಗುರುಳಿದ ಮರಗಳು: ನಗರದೆಲ್ಲಡೇ ಸುಮಾರು 30ಕ್ಕೂ ಅಧಿಕ ಮರಗಳು ನೆಲಕ್ಕುರುಳಿವೆ. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಲು ಬಿಬಿಎಂಪಿ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ಹರಸಾಹಸಪಟ್ಟರು. ರೇಸ್ ಕೋರ್ಸ್ ರಸ್ತೆಯಲ್ಲಿ ಐಷಾರಾಮಿ ಕಾರೊಂದು ನಜ್ಜುಗುಜ್ಜಾಗಿದೆ. ಕುಮಾರ್ ಕೃಪಾ ರಸ್ತೆಯಲ್ಲಿನ ಚಿತ್ರಕಲಾ ಪರಿಷತ್ ಮುಂದೆ ಕಾರು ಮತ್ತು ಬೈಕ್ ಮೇಲೆ ಭಾರೀ ಗಾತ್ರದ ಮರ ಬಿದ್ದು ವಾಹನಗಳು ಸಂಪೂರ್ಣ ಜಖಂ ಆಗಿದ್ದವು.

ಇನ್ನು ಬೆಂಗಳೂರು ಹೊರತುಪಡಿಸಿ ರಾಜ್ಯದ ವಿವಿಧೆಡೆ ಭಾನುವಾರ ಮಳೆ ಸುರಿದಿದೆ. ವಾಹನಗಳಿಗೆ ಮರ ಬಿದ್ದು ಹಾನಿ ಉಂಟಾಗಿದೆ. ಇಂದೂ ಹವಾಮಾನ ಇಲಾಖೆ ಮಳೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ:ರಾಜ್ಯದ ವಿವಿಧೆಡೆ ಭಾರೀ ಗಾಳಿ ಸಹಿತ ಮಳೆ.. ಏಳು ಮಂದಿ ಸಾವು, ಜನಜೀವನ ಅಸ್ತವ್ಯಸ್ತ

ABOUT THE AUTHOR

...view details