ಬೆಂಗಳೂರು : ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಅಪರಾಧಕ್ಕೆ ನಟ ದರ್ಶನ್ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರಿಗೆ ತಲಾ 250 ರೂ. ದಂಡ ವಿಧಿಸಿದ್ದೇವೆ ಹಾಗೂ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಸರ್ಕಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಸ್ವತಃ ವಕೀಲರೂ ಆಗಿರುವ ಸಂಸದ ಮತ್ತು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಹೈಕೋರ್ಟ್ ಪದೇಪದೆ ಪ್ರಶ್ನಿಸಿದ ಬಳಿಕ ಸರ್ಕಾರ ಅಂತಿಮವಾಗಿ ದಂಡ ವಿಧಿಸುವ ಕೆಲಸ ಮಾಡಿದೆ. ನಿಯಮ ಉಲ್ಲಂಘಿಸಿದ 38 ದಿನಗಳ ಬಳಿಕ ಹೈಕೋರ್ಟ್ ಒತ್ತಾಯಕ್ಕೆ ಮಣಿದು ನವೆಂಬರ್ 7ರಂದು 250 ರೂ. ದಂಡ ವಿಧಿಸಿದೆ.
ಸರ್ಕಾರ ತನ್ನ ವರದಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ನಗರಕ್ಕೆ ಸೆಪ್ಟೆಂಬರ್ 30ರಂದು ವಾಪಸ್ಸಾಗಿದ್ದರು. ಅಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆಂಪೇಗೌಡ ಏರ್ಪೋರ್ಟ್ನಿಂದ ಆಗಮಿಸಿದ ಅವರನ್ನು ಟೋಲ್ ಪ್ಲಾಜಾ ಬಳಿಯಿಂದ ತೆರೆದ ವಾಹನದಲ್ಲಿ ಕರೆ ತರಲು ಸುಮಾರು 200 ಮಂದಿ ಸೇರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಅವರಿಗೆ ನಿಯಮ ಉಲ್ಲಂಘಿಸದಂತೆ ಮನ್ನೆಚ್ಚರಿಕೆ ನೀಡಲಾಗಿತ್ತು. ಹಾಗಿದ್ದೂ ಕಾರ್ಯಕರ್ತರು ನಿಯಮ ಉಲ್ಲಂಘಿಸಿದ್ದಾರೆ. ಕಾರ್ಯಕರ್ತರು ನಿಯಮ ಉಲ್ಲಂಘಿಸಿದ ಸಂಬಂಧ ವೈಯ್ಯಾಲಿ ಕಾವಲ್ ಠಾಣೆ ಪೊಲೀಸರು ಹಾಗೂ ಚಿಕ್ಕಜಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ರೀತಿ ಕ್ರಮ ಜರುಗಿಸಲು ಅನುಮತಿ ಕೋರಿ ದೇವನಹಳ್ಳಿ ಜೆಎಂಎಫ್‌ಸಿ ಹಾಗೂ ನಗರದ 8ನೇ ಎಸಿಎಂಎಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ ಎಂದು ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ.