ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ನಟ ಚೇತನ್ಗೆ ನಗರದ 8ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ನೀಡಿದೆ. ಜಾತಿ, ಧರ್ಮ ಹಾಗೂ ಎರಡು ಗುಂಪಿನ ನಡುವೆ ದ್ವೇಷ ಬಿತ್ತುವ ಹೇಳಿಕೆ ಪ್ರಚುರಪಡಿಸಿದ್ದಾರೆ ಎಂಬ ಆರೋಪದಡಿ ಕಳೆದ ಮಂಗಳವಾರ ಶೇಷಾದ್ರಿಪುರಂ ಠಾಣೆ ಪೊಲೀಸರು ನಟ ಚೇತನ್ ಅವರನ್ನು ಬಂಧಿಸಿದ್ದರು. ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಪ್ರಕರಣದಲ್ಲಿ ಜಾಮೀನು ಕೋರಿ ನಟ ಚೇತನ್ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ನಗರದ 8ನೇ ಎಸಿಎಂಎಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ. ಆರೋಪಿಯು 1 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ನೀಡಬೇಕು. ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತೆ ನೀಡಬೇಕು. ಆರೋಪಿ ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗಬಾರದು. ಕೋಮು ಸೌಹಾರ್ದತೆ ಕದಡುವ ಅಥವಾ ಸಮಾಜದ ಶಾಂತಿ ಕೆಡಿಸುವಂತಹ ಪೋಸ್ಟ್ಗಳನ್ನು ಹಾಕಬಾರದು. ಪ್ರಕರಣದ ಸಾಕ್ಷ್ಯಗಳನ್ನು ನಾಶಪಡಿಸಬಾರದು.
ತನಿಖಾಧಿಕಾರಿಯ ತನಿಖೆಗೆ ಸಹಕಾರ ನೀಡಬೇಕು. ನ್ಯಾಯಾಲಯದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ವಿಳಾಸ ಹಾಗೂ ಗುರುತಿನ ಚೀಟಿಗಳನ್ನು ಖಾತ್ರಿಪಡಿಸಬೇಕು. ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ರದ್ದಾಗಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.