ಬೆಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿರುವ ನೀರಾ ಘಟಕವನ್ನು ವಹಿಸಿಕೊಳ್ಳಲು ವಿಟ್ಲದ ಜಿಲ್ಲಾ ತೆಂಗು ಬೆಳೆಗಾರರ ರೈತ ಉತ್ಪಾದಕ ಸಂಘ ಮುಂದೆ ಬಂದಿದೆ. ಅವರಿಗೆ ವಿಸ್ತೃತ ಯೋಜನಾ ವರದಿ ನೀಡುವಂತೆ ತಿಳಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆ ಸಚಿವ ಮುನಿರತ್ನ ತಿಳಿಸಿದ್ದಾರೆ. ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ನ ಹರೀಶ್ ಕುಮಾರ್ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ತುಂಬೆಯಲ್ಲಿರುವ ನೀರಾ ಘಟಕ ಪುನರಾರಂಭ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ತುಂಬೆಯ ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ನೀರಾ ಘಟಕ ಚಾಲನೆ ಆಗಿಲ್ಲ. 2017 ರಲ್ಲಿ ಕೇರಳಾದಿಂದ ಸಂಸ್ಥೆ ಬಂದಿದ್ದು, ಪಿಪಿಪಿ ಮಾಡಲ್ನಲ್ಲಿ ನೀರಾ ಘಟಕ ಪ್ರಾರಂಭಕ್ಕೆ ಒಡಂಬಡಿಕೆ ಆಗಿತ್ತು.
ನಂತರ ಅವರು ಘಟಕ ಪ್ರಾರಂಭಕ್ಕೆ ಬರಲಿಲ್ಲ. ಆದಾದ ಬಳಿಕ ಹೊಸ ಟೆಂಡರ್ ಕರೆದಿದ್ದೆವು. ಈಗ ಹೊಸದಾಗಿ ವಿಟ್ಲದ ಜಿಲ್ಲಾ ತೆಂಗು ಬೆಳೆಗಾರರ ರೈತ ಉತ್ಪಾದಕ ಸಂಘದವರು ಬಂದಿದ್ದಾರೆ. ಅವರಿಗೆ ಡಿಪಿಆರ್ ಮಾಡೋಕೆ ಸೂಚನೆ ಕೊಡಲಾಗಿದೆ. ನೀರಾ ಘಟಕ ಸ್ಥಾಪನೆಗೆ ಕ್ರಮವಹಿಸುತ್ತೇವೆ ಎಂದರು.
ಶೇ.50 ಸೀಟು ಮೀಸಲು: ಕೃಷಿ ವಿಶ್ವವಿದ್ಯಾಲಯಗಳಲ್ಲಿ ರೈತರ ಮಕ್ಕಳಿಗೆ ಶೇ. 50ರಷ್ಟು ಸೀಟುಗಳನ್ನು ಮೀಸಲು ಇಡಲಾಗಿದೆ. ಈ ವರ್ಷದಿಂದಲೇ ನೂತನ ಎರಡು ಕೃಷಿ ವಿವಿ ಪ್ರಾರಂಭ ಮಾಡುತ್ತೇವೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪ್ರತಿಪಕ್ಷ ಸಚೇತಕ ಪ್ರಕಾಶ್ ರಾಥೋಡ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೃಷಿ ವಿವಿಗಳಲ್ಲಿ ಸುಮಾರು 133 ಕೋರ್ಸ್ಗಳು ಇವೆ. ರಾಜ್ಯದ ಕೃಷಿ ವಿವಿಯಲ್ಲಿ 1,844 ಸೀಟು ಇವೆ. ಇದರಲ್ಲಿ 922 ಸೀಟುಗಳು ರೈತರ ಮಕ್ಕಳಿಗೆ ಸಿಗುತ್ತದೆ. ಈ ವರ್ಷದ ಬಜೆಟ್ನಲ್ಲಿ ಬಳ್ಳಾರಿ ಮತ್ತು ಬೆಳಗಾವಿಯಲ್ಲಿ ಕೃಷಿ ವಿವಿ ಪ್ರಾರಂಭಕ್ಕೆ ಘೋಷಣೆ ಮಾಡಿದ್ದಾರೆ. ಈ ವರ್ಷದಿಂದಲೇ ನೂತನ ಎರಡು ಕೃಷಿ ವಿವಿ ಪ್ರಾರಂಭ ಮಾಡುತ್ತೇವೆ ಎಂದರು.