ಕರ್ನಾಟಕ

karnataka

ETV Bharat / state

ಅಂಗನವಾಡಿ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆ ಈಡೇರಿಸಲು ಕ್ರಮ: ಸಚಿವ ಹಾಲಪ್ಪ ಆಚಾರ್

ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ಅಹೋರಾತ್ರಿ ಪ್ರತಿಭಟನೆಯನ್ನು ಸಿಐಟಿಯು ಹಿಂದಕ್ಕೆ ಪಡೆದ ನಂತರ ಸಂಘದ ಪ್ರಮುಖರೊಂದಿಗೆ ಸಚಿವ ಹಾಲಪ್ಪ ಇಂದು ಸಭೆ ನಡೆಸಿದ್ದಾರೆ.

Minister Halappa Achar with Anganavadi workers
ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಚಿವ ಹಾಲಪ್ಪ ಆಚಾರ್

By

Published : Feb 3, 2023, 1:46 AM IST

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ಹಂತ ಹಂತವಾಗಿ ಆದೇಶ ಹೊರಡಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪ್ರಮುಖರೊಂದಿಗೆ ಸಭೆ ನಡೆಸಿದ ಸಚಿವರು ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯ ಸಚಿವ ಸಂಪುಟ ಬೇಡಿಕೆ ಈಡೇರಿಕೆಗೆ ಸಮ್ಮತಿ ಸೂಚಿಸಿದ ಹಿನ್ನೆಲೆ ನಿನ್ನೆ ರಾತ್ರಿ ಪ್ರತಿಭಟನೆ ಹಿಂತೆದುಕೊಳ್ಳುವುದಾಗಿ ಸಿಐಟಿಯು ಹೇಳಿತ್ತು.

ಸಭೆಯ ನಂತರ ಮಾಹಿತಿ ನೀಡಿದ ಸಚಿವ ಹಾಲಪ್ಪ ಆಚಾರ್, ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ಸೌಲಭ್ಯ ಕಲ್ಪಿಸಲು ಹಣಕಾಸು ಇಲಾಖೆ ಅನುಮತಿ ನೀಡಿದ್ದು, ಆದಷ್ಟು ಬೇಗ ಆದೇಶ ಹೊರಡಿಸಲಾಗುವುದು. ಇದರ ಕುರಿತು ಇನ್ನೊಂದು ಸಭೆ ನಡೆಸಲಾಗುವುದು. ಇದರ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡಬೇಕೆಂಬ ಬೇಡಿಕೆ ಕುರಿತಂತೆಯೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಮೂರು ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ತೆಗೆದುಕೊಳ್ಳುವ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರಿಗೆ ರಾಜ್ಯದ ಎಲ್ಲಾ ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಲು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಪತ್ರ ಬರೆದು ಉಚಿತ ಆರೋಗ್ಯ ಸೌಲಭ್ಯ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಹತ್ತು ದಿನದ ಅಹೋರಾತ್ರಿ ಪ್ರತಿಭಟನೆ:ಅಂಗನವಾಡಿ ಕಾರ್ಕರ್ತೆಯರನ್ನೂ ಕೂಡ ಸರ್ಕಾರಿ ಶಿಕ್ಷಕಿಯರೆಂದು ಪರಿಗಣಿಸಿ ಅವರಿಗೂ, ಗ್ರಾಚ್ಯುಟಿ, ಪಿಂಚಣಿ ಸೌಲಭ್ಯ, ವೇತನ ಸಹಿತ ರಜೆ ನೀಡಬೇಕು, ಸುಪ್ರೀಂ ಕೋರ್ಟ್​ ಮಾರ್ಗಸೂಚಿಗಳ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರ ಫ್ರೀಡಂ ಪಾರ್ಕ್​ನಲ್ಲಿ ಹತ್ತು ದಿನಗಳ ಹಿಂದೆ ಸೋಮವಾರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಅನಿರ್ದಿಷ್ಟಾವಧಿ ಪ್ರತಿಭಟನೆ ಪ್ರಾರಂಭಿಸಿದ್ದರು. ಈ ಹಿಂದೆ ಪ್ರತಿಭಟನೆ ಕೈಗೊಂಡಾಗ ಸಚಿವ ಅಶ್ವತ್ಥ ನಾರಾಯಣ ಅವರ ಭರವಸೆ ಮೇರೆಗೆ ಶನಿವಾರ ಪ್ರತಿಭಟನೆ ಕೈಬಿಟ್ಟಿದ್ದರು. ಆದರೆ ಮತ್ತೆ ಸೋಮವಾರ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ಪ್ರಾರಂಭಿಸಿದ ಕಾರ್ಯಕರ್ತೆಯರು ಲಿಖಿತ ಭರವಸೆ ಸಿಗುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ್ದರು.

ಎರಡು ದಿನಗಳ ಹಿಂದೆಯಷ್ಟೆ ರಾಜ್ಯ ಸರ್ಕಾರಕ್ಕೆ 48 ಗಂಟೆಗಳ ಗಡುವು ನೀಡಿದ್ದ ಅಂಗನವಾಡಿ ಕಾರ್ಯಕರ್ತೆಯರು, ಒಂದು ವೇಳೆ ವಿಫಲವಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದರು. ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿಗಳು ಆದೇಶ ನೀಡಬೇಕು ಎಂದು ಒತ್ತಾಯಿಸಿದ್ದರು. ಆದೇಶ ನೀಡದೇ ಇದ್ದಲ್ಲಿ, ಪ್ರತಿಭಟನಾ ನಿರತರಾಗಿರುವ ಎಲ್ಲಾ ಕಾರ್ಯಕರ್ತರು ಸಿಎಂ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಸರ್ಕಾರ ಭರವೆಸೆಗಳಿಗೆ ಸಮ್ಮತಿಸಿರುವುದರಿಂದ ಕಳೆದ ಹತ್ತು ದಿನಗಳಿಂದ ಫ್ರೀಡಂ ಪಾರ್ಕ್​ನಲ್ಲಿ ನಡೆಯುತ್ತಿದ್ದ ಅಹೋರಾತ್ರಿ ಪ್ರತಿಭಟನೆಯನ್ನು ನಿನ್ನೆ ರಾತ್ರಿಯೇ ಹಿಂಪಡೆದಿದ್ದಾರೆ.

ಇದನ್ನೂ ಓದಿ:ಬಜೆಟ್: ರಾಜ್ಯದ ನಿರೀಕ್ಷೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ: ಸಿಎಂ ಬೊಮ್ಮಾಯಿ

ABOUT THE AUTHOR

...view details