ಬೆಂಗಳೂರು:''ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಸೆಪ್ಟೆಂಬರ್ ತಿಂಗಳಿನಿಂದಲೇ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ'' ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು (ಶುಕ್ರವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಬಿಪಿಎಲ್ ಕಾರ್ಡ್ದಾರರಿಗೆ 5 ಕೆಜಿ ಹೆಚ್ಚುವರಿಗಾಗಿ ವಿತರಿಸಲು ಅಕ್ಕಿ ಸಿಗದ ಕಾರಣ ಪ್ರತಿ ಫಲಾನುಭವಿಗೆ ಐದು ಕೆಜಿ ಅಕ್ಕಿ ಬೆಲೆ 170 ರೂ. ಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಯೋಜನೆ ಜಾರಿಗೆ ಬಂದು ಒಂದು ತಿಂಗಳೊಳಗೆ ಒಂದು ಕೋಟಿಗೂ ಅಧಿಕ ಪಡಿತರ ಕುಟುಂಬಗಳ ಫಲಾನುಭವಿಗಳಿಗೆ 566 ಕೋಟಿ ರೂ. ಜಮೆ ಮಾಡಲಾಗಿದೆ. ಇದರಿಂದ 3.50 ಕೋಟಿ ಫಲಾನುಭವಿಗಳಿಗೆ ಅನುಕೂಲವಾಗಿದೆ'' ಎಂದು ಹೇಳಿದರು.
ಕೆಜಿ ಅಕ್ಕಿಗೆ 34 ರೂ. ನೀಡಿ ಖರೀದಿಸುವ ಬಗ್ಗೆ ಮಾತುಕತೆ:''ಈ ರೀತಿ ಹಣ ಹಾಕುವುದು ಎರಡು ತಿಂಗಳು ಮಾತ್ರ. ಸೆಪ್ಟಂಬರ್‌ನಿಂದ ಅಕ್ಕಿಯನ್ನೇ ವಿತರಣೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಅಕ್ಕಿ ಖರೀದಿಗೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ಇತರ ರಾಜ್ಯಗಳ ಆಹಾರ ಇಲಾಖೆ ಸಚಿವರುಗಳ ಜೊತೆ ಚರ್ಚೆ ಆಗಿದೆ. ಕೇಂದ್ರ ಸರ್ಕಾರದ ದರದಂತೆ ಪ್ರತಿ ಕೆ.ಜಿ. ಅಕ್ಕಿಗೆ 34 ರೂ. ನೀಡಿ ಖರೀದಿಸುವ ಬಗ್ಗೆಯೂ ಮಾತುಕತೆ ನಡೆದಿವೆ. ನಮ್ಮ ಬೆಲೆಗೆ ಈ ರಾಜ್ಯಗಳು ಅಕ್ಕಿ ನೀಡಲು ಒಪ್ಪಿದರೆ ಬಹುಶಃ ಸೆಪ್ಟೆಂಬರ್ ತಿಂಗಳಲ್ಲೇ ಅನ್ನಭಾಗ್ಯ ಯೋಜನೆಯಡಿ ಹಣ ನೀಡುವುದನ್ನು ಸ್ಥಗಿತಗೊಳಿಸಿ ಅಕ್ಕಿಯನ್ನೇ ವಿತರಿಸಲಾಗುವುದು. ಒಂದು ವಾರದೊಳಗೆ ಎಲ್ಲವೂ ಅಂತಿಮವಾಗಲಿದೆ'' ಎಂದು ಸಚಿವರು ಮಾಹಿತಿ ನೀಡಿದರು.
''ಆಂಧ್ರ, ತೆಲಂಗಾಣ ರಾಜ್ಯಗಳಿಂದ ಅಕ್ಕಿ ಖರೀದಿಸುವ ಪ್ರಯತ್ನ ಈ ಹಿಂದೆಯೇ ಮಾಡಲಾಗಿತ್ತು. ಆದರೆ, ದರ ಹೆಚ್ಚಾದ ಕಾರಣ ಖರೀದಿ ಸಾಧ್ಯವಾಗಲಿಲ್ಲ. ಈಗ ಪ್ರತಿ ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರದ ದರದಂತೆ ಅಂದರೆ 34 ರೂ.ನಂತೆ ಪೂರೈಸಲು ಈ ರಾಜ್ಯಗಳು ಮುಂದಾಗಿದ್ದು, ಅಕ್ಕಿ ಖರೀದಿಯ ಸಂಬಂಧ ಮಾತುಕತೆ ನಡೆಸಲಾಗಿದೆ. ಮಾತುಕತೆ ಫಲಪ್ರದವಾದರೆ ಬಿಪಿಎಲ್ ಕಾರ್ಡ್ ದಾರರಿಗೆ ಪೂರ್ಣ ಪ್ರಮಾಣದಲ್ಲಿ ಹತ್ತು ಕೆಜಿ ಅಕ್ಕಿ ನೀಡುವುದು'' ಎಂದು ಹೇಳಿದರು.
ಬಾಕಿ ಹಣ ಕೊಡಲು ಸಾಧ್ಯವಿಲ್ಲ: ''ಅನ್ನಭಾಗ್ಯ ಯೋಜನೆಯಡಿ ಬ್ಯಾಂಕ್ ಖಾತೆ ಹೊಂದಿಲ್ಲದ ಬಿಪಿಎಲ್ ಕಾರ್ಡ್ದಾರರಿಗೆ ನಗದು ಹಣ ವರ್ಗಾವಣೆ ಯೋಜನೆಯಡಿ ಬಾಕಿ ಹಣವನ್ನು ಕೊಡಲು ಸಾಧ್ಯವಿಲ್ಲ. ಅವರು ಬ್ಯಾಂಕ್ ಖಾತೆ ಹೊಂದಿದ ದಿನದಿಂದ ಹಣವನ್ನು ನೀಡಲಾಗುತ್ತದೆ. ಇದುವರೆಗೂ ಒಂದು ಕೋಟಿ ಕುಟುಂಬಗಳಿಗೆ 566 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಲಾಗಿದೆ. ಬಾಕಿ ಕುಟುಂಬಗಳು ಖಾತೆ ಮತ್ತು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಿದ ನಂತರ ಅವರಿಗೂ ಹಣವನ್ನು ನೀಡುತ್ತೇವೆ. ಆದರೆ, ಇವರಿಗೆ ಬಾಕಿ ಹಣ ನೀಡುವುದಿಲ್ಲ. ಎಂದಿನಿಂದ ಖಾತೆ ನಂಬರ್ ನೀಡುತ್ತಾರೋ ಆ ತಿಂಗಳಿನಿಂದ ಹಣ ನೀಡುತ್ತೇವೆ'' ಎಂದು ಸಚಿವರು ಸ್ಪಷ್ಟಪಡಿಸಿದರು.
''ಅನ್ನಭಾಗ್ಯ ಯೋಜನೆಯಡಿ ನೇರ ನಗದು ವರ್ಗಾವಣೆ ಯೋಜನೆಗೆ ಚಾಲನೆ ಸಿಕ್ಕಿ 25 ದಿನಗಳಾಗಿದ್ದು, ಅತಿ ಕಡಿಮೆ ಸಮಯದಲ್ಲಿ ಆಹಾರ ಇಲಾಖೆಯು ಒಂದು ಕೋಟಿ ಕುಟುಂಬಗಳಿಗೆ 566 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿದೆ. ಇದು ದಾಖಲೆಯಾಗಿದೆ. ಉಳಿದ 28 ಲಕ್ಷ ಕುಟುಂಬಗಳ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆಯಾಗಿಲ್ಲ. ಹಾಗಾಗಿ ಇವರಿಗೆ ಹಣ ವರ್ಗಾವಣೆಯಾಗಿಲ್ಲ'' ಎಂದರು.