ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆ ದುರುಪಯೋಗ ಆಗಿದ್ದರೆ, ಅದರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ರು.
ವಿಧಾನಸಭೆಯಲ್ಲಿಂದು ಶೂನ್ಯ ವೇಳೆ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ವಿಷಯ ಪ್ರಸ್ತಾಪಿಸಿ, ನನ್ನ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟಿರುವ ಜೈನ ಸಮುದಾಯದವರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ. ಸ್ಥಳದಲ್ಲಿ ಇಲ್ಲದೇ ಇರುವವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಕೆಲವು ಕಾಯ್ದೆಗಳು ದುರುಪಯೋಗವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಆಗ ಉತ್ತರ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು, ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಬಳಸಬೇಕಾದ ರೀತಿಗಳ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟ ಮಾರ್ಗಸೂಚಿ ನೀಡಿದೆ. ಪೊಲೀಸ್ ಅಧಿಕಾರಿಗಳು ಅದನ್ನು ಪಾಲಿಸಲೇಬೇಕು. ಒಂದು ವೇಳೆ ಮಾರ್ಗಸೂಚಿಗಳ ಉಲ್ಲಂಘನೆಯಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ದುರುಪಯೋಗ ಆಗಿದ್ದರೆ ಕ್ರಮ ಬಡ್ಡಿ ಮನ್ನಾ ಇಲ್ಲ:ಬೀದಿ ಬದಿ ವ್ಯಾಪಾರಿಗಳ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ಸಾಧ್ಯವಿಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದರು. ಶೂನ್ಯ ವೇಳೆಯಲ್ಲಿ ಮಾಜಿ ಸಚಿವ ಎಚ್.ಡಿ. ರೇವಣ್ಣ ವಿಷಯ ಪ್ರಸ್ತಾಪಿಸಿ, ಹಾಸನ ಜಿಲ್ಲೆಯ ಬೀದಿ ಬದಿ ವ್ಯಾಪಾರಿಗಳು ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದು ತೊಂದರೆಗೊಳಗಾಗುತ್ತಿದ್ದು, ಬಡವರ ಬಂಧು ಯೋಜನೆ ಮೂಲಕ ಅವರಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆಯನ್ನು ಹಿಂದಿನ ಕುಮಾರಸ್ವಾಮಿ ಅವರ ಸರ್ಕಾರ ಜಾರಿಗೆ ತಂದಿತ್ತು. ಅದಕ್ಕೂ ಮೊದಲು ಸಹಕಾರ ಸಂಸ್ಥೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಸಣ್ಣ ಪ್ರಮಾಣದ ಸಾಲ ಮಾಡಿದ್ದಾರೆ. ಅದರ ಬಡ್ಡಿ ಮನ್ನಾ ಮಾಡಿ ಎಂದು ಒತ್ತಾಯಿಸಿದರು.
ಅದಕ್ಕೆ ಉತ್ತರಿಸಿದ ಸಚಿವ ಎಸ್.ಟಿ. ಸೋಮಶೇಖರ್, ಸಾಲ ಮಾನ್ನಾ ಮಾಡಲು ಸಾಧ್ಯವಿಲ್ಲ. ಬಡವರ ಬಂಧು ಯೋಜನೆಯಡಿ ಬಡ್ಡಿ ರಹಿತವಾಗಿ ಸಾಲ ನೀಡಲಾಗಿದೆ. ಹೀಗಾಗಿ ಬಡ್ಡಿ ಮನ್ನಾದ ಪ್ರಶ್ನೆ ಉದ್ಭವಿಸುವುದಿಲ್ಲ. ಅದಕ್ಕೆ ಪ್ರತಿಕ್ರಿಯಿಸಿದ ರೇವಣ್ಣ, ಬಡವರ ಬಂಧು ಯೋಜನೆಗಿಂತ ಮೊದಲು ಸಹಕಾರ ಸಂಸ್ಥೆಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಸುಮಾರು 50 ಸಾವಿರ ರೂ. ಸಾಲ ಪಡೆದಿದ್ದಾರೆ. ಅದರ ಬಡ್ಡಿ ಬೆಳೆದು ಲಕ್ಷ ರೂ. ದಾಟಿದೆ ಅದನ್ನು ಮನ್ನಾ ಮಾಡಿ ಎಂದು ಹೇಳಿದರು.ಇದಕ್ಕೆ ಉತ್ತರಿಸಿದ ಸಚಿವರು, ಪರಿಶೀಲಿಸುವುದಾಗಿ ಭರವಸೆ ನೀಡಿದರು.