ಕರ್ನಾಟಕ

karnataka

ETV Bharat / state

ಜಾತಿ, ಸಿಂಧುತ್ವ ಪ್ರಮಾಣ ಪತ್ರ ನೀಡಲು ಅನಗತ್ಯ ವಿಳಂಬವಾದರೆ ಡಿಸಿಗಳ ಮೇಲೆ ಕ್ರಮ: ಸಿಎಂ

ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗೊಂಡ ಹಾಗೂ ಕೊಡಗು ಜಿಲ್ಲೆಯಲ್ಲಿ ಕುರುಬ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ಕೊಟ್ಟಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

By ETV Bharat Karnataka Team

Published : Aug 25, 2023, 9:48 PM IST

ಬೆಂಗಳೂರು : ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗೊಂಡ ಸಮುದಾಯಕ್ಕೆ ಸೇರಿರುವ ಬಗ್ಗೆ ಸಿಆರ್‌ಇ ಸೆಲ್‌ನವರು ಪರಿಶೀಲಿಸಿ ವರದಿ ಕೊಟ್ಟ ನಂತರವೂ ವಿಳಂಬವಾದರೆ ಜಿಲ್ಲಾಧಿಕಾರಿಗಳು ಅನಗತ್ಯವಾಗಿ ವಿಳಂಬ ಮಾಡಿದ್ದಾರೆ ಅಂತ ಅಮಾನತು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗೊಂಡ ಹಾಗೂ ಕೊಡಗು ಜಿಲ್ಲೆಯಲ್ಲಿ ಕುರುಬ ಸಮುದಾಯದವರಿಗೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ, ಸಿಂಧುತ್ವ ಪ್ರಮಾಣ ಪತ್ರ ನೀಡುವ ಸಂಬಂಧ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಶುಕ್ರವಾರ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ಗೊಂಡ ಸಮುದಾಯದವರ ಅಹವಾಲುಗಳನ್ನು ಕೇಳಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ಕೊಟ್ಟರು.

ಇದನ್ನೂ ಓದಿ :100ಕ್ಕೂ ಹೆಚ್ಚು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಚಿಂತನೆ: ಸಚಿವ ಚಲುವರಾಯಸ್ವಾಮಿ

ಸಿಆರ್​ಇ ಸೆಲ್ ಇರುವುದು ಹಕ್ಕುಗಳ ರಕ್ಷಣೆಗಾಗಿ ಹಾಗೂ ಪ್ರಕರಣಗಳ ವಿಚಾರಣೆಗಾಗಿ. ಸಿಆರ್​ಇ ಸೆಲ್ ವಿಚಾರಣೆ ಮಾಡಿ ನೀಡಿದ ವರದಿಯನ್ನು ಅಂಗೀಕರಿಸಬೇಕು. ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗೊಂಡ ಎನ್ನುವ ಸಮುದಾಯ ಎಸ್‌ಟಿಗೆ ಸೇರಿದೆ. ಶಾಲಾ ದಾಖಲಾತಿ, ಪೋಷಕರ ಇತಿಹಾಸ ವನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡಬಹುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರಮಾಣಪತ್ರ ನೀಡಲು ಅನಗತ್ಯವಾಗಿ ವಿಳಂಬ ಮಾಡಬಾರದು. ದೂರುಗಳಿದ್ದರೆ ತನಿಖೆ ಮಾಡಿಸಬೇಕು. ದೂರುಗಳು ಇಲ್ಲದೇ ಹೋದರೆ ಸ್ವಯಂಪ್ರೇರಿತವಾಗಿ ಪ್ರಕರಣಗಳನ್ನು ಕೈಗೊಳ್ಳುವಂತಿಲ್ಲ. ಸಿಆರ್​ಇ ಸೆಲ್‌ನವರು ತನಿಖೆ ಮಾಡಿದ ವರದಿ ನೀಡಿದ ಕೂಡಲೇ ಅಂಗೀಕರಿಸಿ, ಸಂಬಂಧಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಇತ್ಯರ್ಥಗೊಳಿಸಬೇಕು ಎಂದು ಸಿಎಂ ಹೇಳಿದ್ದಾರೆ.

ಕೊಡಗು ಜಿಲ್ಲೆಯ ಕುರುಬ ಸಮುದಾಯದವರು ಮಾತ್ರ ಪರಿಶಿಷ್ಟ ಪಂಗಡಕ್ಕೆ ಸೇರಿರುತ್ತಾರೆ. ಅನಗತ್ಯವಾಗಿ ವಿಳಂಬ ಮಾಡದೇ ತ್ವರಿತವಾಗಿ ಜಾತಿ ಪ್ರಮಾಣ ಪತ್ರಗಳನ್ನು ನೀಡಬೇಕು. ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ವಿದ್ಯಾರ್ಥಿವೇತನಗಳನ್ನು ನೀಡಬಹುದು ಎಂದರು.

ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಅರಣ್ಯ ಸಚಿವ ಈಶ್ವರ ಖಂಡ್ರೆ, ಪರಿಶಿಷ್ಟ ವರ್ಗಗಳ ಕಲ್ಯಾಣ, ಯುವಜನಸೇವಾ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಲಬುರಗಿ, ಬೀದರ್, ಯಾದಗಿರಿ ಹಾಗೂ ಕೊಡಗು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಬಿ. ಕಲ್ಲೇಶ್, ಗೊಂಡ ಹಾಗೂ ಕುರುಬ ಸಮಾಜದ ಪ್ರತಿನಿಧಿಗಳು ಇದ್ದರು.

ಇದನ್ನೂ ಓದಿ :ಅಂಬಾನಿ-ಅದಾನಿ ಮಾತ್ರವಲ್ಲ, ಜನಸಾಮಾನ್ಯರ ಜೇಬಲ್ಲಿ ಹಣವಿದ್ದಲ್ಲಿ ಮಾತ್ರ ಆರ್ಥಿಕಾಭಿವೃದ್ಧಿ: ಸಿದ್ದರಾಮಯ್ಯ

ABOUT THE AUTHOR

...view details