ಬೆಂಗಳೂರು:ಬಿ.ಕೆ.ಪವಿತ್ರ ತೀರ್ಪಿನನ್ವಯ ಜೇಷ್ಠತೆ ಪಟ್ಟಿ ಪರಿಷ್ಕರಿಸುವಾಗ ತಿರುಚಿ ಹಿಂಬಡ್ತಿ ಆದೇಶವನ್ನು ಹೊರಡಿಸಲಾಗಿದೆ. ಇದರಿಂದ 13 ಮಂದಿ ನೌಕರರು ಹಾಗೂ ಅಧಿಕಾರಿಗಳು ಸಾವಿಗೀಡಾಗಿದ್ದರು. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಬೇಕು ಎಂದು ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ಸದಸ್ಯರು ಮುಖ್ಯ ಕಾರ್ಯದರ್ಶಿಗೆ ಒತ್ತಾಯ ಮಾಡಿದ್ದಾರೆ.
ತತ್ಪರಿಣಾಮ ಮೀಸಲು ವಿಸ್ತರಣಾ ಕಾಯ್ದೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ಶೀಘ್ರದಲ್ಲಿ ಕಾಯ್ದೆ ಜಾರಿಗೆ ಆದೇಶ ಹೊರಡಿಸುವಂತೆ ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ಸದಸ್ಯರು ಇಂದು ಮುಖ್ಯ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಸಮಿತಿ ಪದಾಧಿಕಾರಿಗಳು ಬಿ.ಕೆ.ಪವಿತ್ರ ಆದೇಶವನ್ನು ಕೆಲ ಮೇಲಾಧಿಕಾರಿಗಳು ತಮಗೆ ಬೇಕಾದಂತೆ ತಿರುಚಿ ಅನುಷ್ಠಾನಗೊಳಿಸಿದ್ದಾರೆ. ಇದರಿಂದ 13 ಮಂದಿ ನೌಕರರು ಮನನೊಂದು ಸಾವಿಗೀಡಾಗಿದ್ದರು. ಈ ಸಾವಿಗೆ ಕಾರಣರಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.