ಬೆಂಗಳೂರು: ಟ್ರ್ಯಾಕ್ಟರ್ ಮಾರಾಟ ಮಾಡುವ ಡೀಲರ್ಗಳು ಸಾರ್ವಜನಿಕವಾಗಿ ಎಂಆರ್ಪಿ ದರ ಪ್ರಕಟಿಸದಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಡೀಲರ್ಗಳಿಗೆ ಶೋಕಾಸ್ ನೋಟಿಸ್ ನೀಡಿ ಬಿಸಿ ಮುಟ್ಟಿಸುತ್ತಿದೆ.
ರೈತರಿಗೆ ಸಬ್ಸಿಡಿ ದರದಲ್ಲಿ ಮಾರಾಟ ಮಾಡುವ ಟ್ರ್ಯಾಕ್ಟರ್ನ ಎಂಆರ್ಪಿ ದರವನ್ನು ವೆಬ್ಸೈಟ್ಗಳಲ್ಲಿ ಕಡ್ಡಾಯವಾಗಿ ಪ್ರದರ್ಶನ ಮಾಡಲು ಕ್ರಮ ತಗೆದುಕೊಳ್ಳಬೇಕೆಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಎಲ್ಲ ರಾಜ್ಯಗಳ ಕೃಷಿ ಇಲಾಖೆ ಮುಖ್ಯಸ್ಥರಿಗೆ ಪತ್ರ ಬರೆದು ಸೂಚನೆ ನೀಡಿದ್ದರು.
ರಾಜ್ಯದಲ್ಲಿ ಬಹುತೇಕ ಡೀಲರ್ಗಳು ಸಬ್ಸಿಡಿ ಯೋಜನೆಯಡಿ ಮಾರುವ ಟ್ರಾಕ್ಟರ್ಗಳನ್ನು ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಕೇಂದ್ರ ಸರ್ಕಾರದ ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆಯ ಲಾಭ ರೈತರಿಗೆ ದೊರೆಯದಂತೆ ಮಾಡುತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಈ ಬಗ್ಗೆ ದೂರುಗಳು ಸಹ ಸಚಿವೆ ಶೋಭ ಕರಂದ್ಲಾಜೆ ಅವರ ಗಮನಕ್ಕೆ ಬಂದಿದ್ದವು.
ಟ್ರ್ಯಾಕ್ಟರ್ ಡೀಲರ್ಗಳಿಂದ ರೈತರಿಗೆ ಸಬ್ಸಿಡಿ ಯೋಜನೆಯಲ್ಲಿ ಅನ್ಯಾಯವಾಗುತ್ತಿರುವುದಕ್ಕೆ ಕಡಿವಾಣ ಹಾಕಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಧಿಕಾರಿಗಳ ಸಭೆ ನಡೆಸಿ ವೆಬ್ಸೈಟ್ಗಳಲ್ಲಿ ಎಂಆರ್ಪಿ ದರ ಘೋಷಣೆ ಮಾಡುವುದರಿಂದ ಡೀಲರ್ಗಳು ರೈತರಿಗೆ ಮೋಸ ಮಾಡುವುದನ್ನು ತಪ್ಪಿಸಬಹುದಾಗಿದೆ. ಅದಕ್ಕಾಗಿ ನಿಯಮಗಳನ್ನು ರೂಪಿಸಿ ಜಾರಿ ಮಾಡುವಂತೆ ನಿರ್ದೇಶನ ನೀಡಿದ್ದಾರೆ.