ಬೆಂಗಳೂರು: ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ಹಿಂದಿನ ಸರ್ಕಾರ ಜಾರಿಗೆ ತಂದಿರುವ ಎಲ್ಲ ವಿಧೇಯಕಗಳನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡಲಾಗುತ್ತದೆ, ಕೋಮು ಸಾಮರಸ್ಯ ಕದಡುವ ಕೆಲಸವನ್ನು ಯಾವುದೇ ಸಮುದಾಯಕ್ಕೆ ಸೇರಿದ ಸಂಘಟನೆಗಳು ಮಾಡಿದರೂ ಅವನ್ನು ನಿಯಂತ್ರಣ ಮಾಡುತ್ತೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಮರು ಜಾರಿ ವಿಚಾರದಲ್ಲಿ ನನಗೆ ಮಾಹಿತಿ ಇಲ್ಲ. ಹಿಂದಿನ ಸರ್ಕಾರ ಯಾವ ಜಯಂತಿ ಮಾಡಬೇಕು ಬೇಡ ಎನ್ನುವುದನ್ನು ತಂದಿದ್ದಾರೆ ಎಂಬುದನ್ನು ನೋಡಬೇಕು. ಅಷ್ಟು ಮಾತ್ರವಲ್ಲ ಪಠ್ಯಪುಸ್ತಕ, ಗೋಹತ್ಯೆ, ಮತಾಂತರ ಬಿಲ್ಗಳನ್ನು ಮತ್ತೊಮ್ಮೆ ಪರಿಷ್ಕರಣೆ ಮಾಡುತ್ತೇವೆ. ಯಾವ ಯಾವ ಬಿಲ್ನಿಂದ ಕನ್ನಡಿಗರಿಗೆ ತೊಂದರೆಯಾಗುತ್ತದೆಯೋ ಅದನ್ನು ವಾಪಸ್ ಪಡೆದು, ಮತ್ತೊಮ್ಮೆ ರಾಜ್ಯವನ್ನು ನಂಬರ್ ಒನ್ ಮಾಡುತ್ತೇವೆ ಎಂದರು.
ಕೆಲ ಹಿಂದೂಪರ ಸಂಘಟನೆಗಳು ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದು, ರಾಜ್ಯದಲ್ಲಿ ಇಸ್ಲಾಮಿಕ್ ಸರ್ಕಾರವಿದೆ ಎಂದು ಟೀಕಿಸಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ಯಾವುದೇ ಸಂಘಟನೆ ಕೋಮು ವಿಷಬೀಜ ಬಿತ್ತುವ ವಿಚಾರ ಹರಡಿದರೆ, ಶಾಂತಿ ಕದಡುವ ಪ್ರಯತ್ನ ಮಾಡಿದರೆ ಅವರನ್ನು ಯಾವುದೇ ಸಮುದಾಯಕ್ಕೆ ಸೇರಿದ್ದರೂ ನಿಯಂತ್ರಣ ಮಾಡುವ ಕೆಲಸವನ್ನು ಮಾಡುತ್ತೇವೆ. ಇದೇ ರೀತಿ ಸಾಮಾಜಿಕ ಜಾಲತಾಣ ದುರುಪಯೋಗಪಡಿಸಿಕೊಂಡು ಬಿಜೆಪಿ ಸರ್ಕಾರ ಮತ್ತು ಅವರ ಸಂಘಟನೆಗಳು ರಾಜ್ಯವನ್ನು ಹಿಂದಕ್ಕೆ ತೆಗೆದುಕೊಂಡು ಹೋಗಿವೆ, ಪ್ರಚೋದನಾಕಾರಿ ಭಾಷಣ ಮಾಡುವುದು, ಸಂವಿಧಾನವನ್ನು ಗಾಳಿಗೆ ತೂರುವುದು, ಬಸವ ತತ್ವದ ಬಗ್ಗೆ ಹಗುರವಾಗಿ ಮಾತನಾಡುವುದು ಸೇರಿದಂತೆ ನಮ್ಮ ಪ್ರಗತಿಗೆ ವಿರುದ್ಧವಾದ ಎಲ್ಲದಕ್ಕೂ ನಾವು ಕಡಿವಾಣ ಹಾಕುತ್ತೇವೆ ಎಂದು ನೇರವಾಗಿ ಸಂಘ ಪರಿವಾರ ಮತ್ತು ಹಿಂದೂಪರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಎಚ್ಚರಿಕೆ ನೀಡಿದರು.
ಪೊಲೀಸರು ಸಂಘದ ಕಚೇರಿಯಲ್ಲಿ ಕೆಲಸ ಮಾಡ್ತಾರಾ?: ಬಿಜೆಪಿ ಸರ್ಕಾರದಲ್ಲಿ ಕೇಸರೀಕರಣ ಯಾವ ಮಟ್ಟಕ್ಕೆ ಹೋಗಿ ಮುಟ್ಟಿತ್ತು ಎಂದರೆ ಖಾಕಿ ಹಾಕಿಕೊಳ್ಳಬೇಕಾದ ಪೊಲೀಸರು ಕೇಸರಿ ಶಾಲು ಹಾಕಿಕೊಂಡು ಫೋಟೋ ತೆಗೆಸಿಕೊಂಡಿದ್ದರು. ಸಂವಿಧಾನದ ಪ್ರಕಾರ ಅವರು ಇದನ್ನು ಮಾಡಬಹುದಾ? ಹಾಗಾದರೆ ಖಾಕಿ ಯಾಕೆ ಇರಬೇಕು? ಕಾನೂನು ಯಾಕೆ ಇರಬೇಕು? ಇವರೆಲ್ಲಾ ಏನು ಆರ್ಎಸ್ಎಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರಾ? ಅಥವಾ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದರಾ? ಅದಕ್ಕಾಗಿ ನಿನ್ನೆ ಸಭೆಯಲ್ಲಿ ನಮ್ಮ ಡಿಸಿಎಂ ಸ್ಪಷ್ಟವಾಗಿ ಪೊಲೀಸರಿಗೆ ತಾಕೀತು ಮಾಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಇರುವವರ ರಾಜಕೀಯ ಹಿತಾಸಕ್ತಿ ಯಾವುದೇ ಇರಬಹುದು. ಆ ಬಣ್ಣವನ್ನು ನೀವು ಮತದಲ್ಲಿ ತೋರಿಸಿ. ಆದರೆ, ಕರ್ತವ್ಯ ಸಂವಿಧಾನದ ಪರವಾಗಿ ಮಾಡಿ, ಕಾನೂನು ಪ್ರಕಾರ ಮಾಡಿ ಎಂದು ಪೊಲೀಸ್ ಇಲಾಖೆಗೆ ತಾಕೀತು ಮಾಡಿರುವ ಡಿಸಿಎಂ ಡಿ ಕೆ ಶಿವಕುಮಾರ್ ನಡೆಯನ್ನು ಸಚಿವ ಖರ್ಗೆ ಸಮರ್ಥಿಸಿಕೊಂಡರು.