ಬೆಂಗಳೂರು:ಕೋವಿಡ್ ಮೃತ ದೇಹ ಕೊಂಡೊಯ್ಯಲು ಖಾಸಗಿ ಆ್ಯಂಬುಲೆನ್ಸ್ ನವರು ಸುಲಿಗೆ ಮಾಡಿದಲ್ಲಿ ಅಂತಹವರನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾದಂತಹ ಕಷ್ಟದ ಸಂದರ್ಭದಲ್ಲಿ ಆಸ್ಪತ್ರೆಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಆ್ಯಂಬುಲೆನ್ಸ್ ಚಾಲಕರು, ಟಿಟಿ ಡ್ರೈವರ್ಗಳು ಹೆಚ್ಚಿನ ಹಣ ಪಡೆದು ಜನರಿಗೆ ಮೋಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಈ ಸಂಬಂಧ ಕೆಲವರನ್ನು ಜೈಲಿಗೆ ಹಾಕಿದ್ದೇವೆ ಮತ್ತೆ ಕೆಲವರ ವಿರುದ್ಧ ಕೇಸು ದಾಖಲಿಸಿದ್ದೇವೆ. ಆದರೂ ಕೆಲವರು ಬುದ್ದಿ ಕಲಿತಿಲ್ಲ, ಇನ್ಮುಂದೆ ಖಾಸಗಿ ಆ್ಯಂಬುಲೆನ್ಸ್ ಚಾಲಕರು ಸುಲಿಗೆಗೆ ಇಳಿದಿದ್ದು ತಿಳಿದುಬಂದರೆ ಬಂಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಆರ್ ಅಶೋಕ್ ಹೆಚ್ಚು ಹಣ ನೀಡಿ ಸುಲಿಗೆ ಮಾಡುವುದಕ್ಕೆ ಸಾರ್ವಜನಿಕರು ಅವಕಾಶ ನೀಡಬಾರದು, ಆ್ಯಂಬುಲೆನ್ಸ್ನವರು ಈ ರೀತಿ ಹೆಚ್ಚು ಹಣ ಕೇಳಿದರೆ ಸರ್ಕಾರದ ಗಮನಕ್ಕೆ ತನ್ನಿ, ಬಿಬಿಎಂಪಿ 100ಕ್ಕೂ ಹೆಚ್ಚು ವಾಹನಗಳನ್ನು ಶವ ಸಾಗಾಣಿಕೆಗೆ ಉಚಿತವಾಗಿ ನೀಡುತ್ತಿದೆ. ಕಂಟ್ರೋಲ್ ರೂಂಗೆ ಕರೆ ಮಾಡಿದರೆ ಸಾಕು ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ. ಈ ಸೌಲಭ್ಯ ಬಳಸಿಕೊಳ್ಳಿ ಎಂದರು.
ಕೆಲ ವೈದ್ಯರ ಜೊತೆ ಹೊಂದಾಣಿಕೆ ಮಾಡುಕೊಂಡು ಆಸ್ಪತ್ರೆಯಿಂದ ಮರಣ ಪ್ರಮಾಣ ಪತ್ರ ತೆಗೆದುಕೊಂಡು ಹೋಗುವಲ್ಲಿಯೂ ಮೋಸ ಮಾಡುತ್ತಿದ್ದಾರೆ. ಸುಲಿಗೆ ಮಾಡುತ್ತಿದ್ದಾರೆ ಅವರ ಮೇಲೆ ಕಟ್ಡುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಪುಂಡರನ್ನು, ಕಿಡಿಗೇಡಿಗಳನ್ನು ಸರ್ಕಾರ ಮಟ್ಟ ಹಾಕಲಿದೆ ಎಂದರು.
ಸರ್ಕಾರದಿಂದ ಶಿಫಾರಸಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗುವ ಕೋವಿಡ್ ಸೋಂಕಿತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ಖಾಸಗಿ ಆಸ್ಪತ್ರೆಗಳು ನೀಡಿರುವ ಬಿಲ್ಗಳನ್ನು ಸರ್ಕಾರ ಪಾವತಿಸಿದೆ. ಮತ್ತೆ ಬರುವ ಬಿಲ್ಗಳನ್ನೂ ಪಾವತಿ ಮಾಡಲಾಗುತ್ತದೆ. ಬಾಕಿ ಇದ್ದರೆ ಆ ಬಗ್ಗೆ ಸುಧಾಕರ್ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದರು.