ಕರ್ನಾಟಕ

karnataka

ETV Bharat / state

ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುವರ ವಿರುದ್ಧ ಕಠಿಣ ಕ್ರಮ : ಬಿ.ಸಿ.ಪಾಟೀಲ್ - Minister BC patil news

ಕೆಲ ಚಿಲ್ಲರೆ ಮತ್ತು ಸಗಟು ಮಾರಾಟಗಾರರು ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

B c patil
B c patil

By

Published : Aug 10, 2020, 4:07 PM IST

ಬೆಂಗಳೂರು: ಚಿಲ್ಲರೆ ಮತ್ತು ಸಗಟು ಮಾರಾಟಗಾರರು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಗೊಬ್ಬರ ಮಾರಾಟ ಮಾಡಿದರೆ ಅಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ. ‌

ಇಲಾಖೆಯ ನಿಯಮಾನುಸಾರ ರಸಗೊಬ್ಬರವನ್ನು ರೈತರಿಗೆ ವಿತರಿಸಬೇಕು. ಈಗಾಗಲೇ ಅಗತ್ಯಕ್ಕೆ ಅನುಗುಣವಾಗಿ ರಸಗೊಬ್ಬರ ಸರಬರಾಜಿಗೆ ಕ್ರಮ ಕೈಗೊಳ್ಳಲಾಗಿದ್ದು, ರೈತರು ಯಾವುದೇ ಇಲ್ಲ ಸಲ್ಲದ ವದಂತಿಗಳಿಗೆ, ಸುಳ್ಳು ಸುದ್ದಿಗೆ ಗಮನ ನೀಡದೆ ತಾಳ್ಮೆಯಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ರಸಗೊಬ್ಬರ ಖರೀದಿಸುವಂತೆ ಸಚಿವರು ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.

ಕೆಲ ಚಿಲ್ಲರೆ ಮತ್ತು ಸಗಟು ಮಾರಾಟಗಾರರು ಕೃತಕ ಅಭಾವ ಸೃಷ್ಟಿಸುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಅಂತಹವರನ್ನು ಗುರುತಿಸಿ ಆರೋಪ ಸಾಬೀತಾದಲ್ಲಿ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದರು.

ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಇದುವರೆಗೂ 57.12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 8.51 ಲಕ್ಷ ಹೆಕ್ಟೇರ್ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈ ಬಾರಿ ಕಳೆದ 5 ವರ್ಷಗಳ ಸರಾಸರಿ ಬಿತ್ತನೆಯ ಶೇ.14 ರಷ್ಟು ಹೆಚ್ಚಿನ ಬಿತ್ತನೆಯಾಗಿದೆ. ಕೇಂದ್ರ ಸರ್ಕಾರದ ಹಂಚಿಕೆಯಂತೆ ರಸಗೊಬ್ಬರಗಳನ್ನು ಜಿಲ್ಲೆಗಳಿಗೆ ಸರಬರಾಜು ಮಾಡಲಾಗುತ್ತಿದ್ದು, ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ರಸಗೊಬ್ಬರ ಸರಬರಾಜಾಗಿದೆ ಎಂದರು.

ಜುಲೈ ತಿಂಗಳಿನಲ್ಲಿ ಮಂಗಳೂರು ಬಂದರಿಗೆ ಆಗಮಿಸಬೇಕಿದ್ದ ಹಡಗು ಸಕಾಲಕ್ಕೆ ಬಾರದಿರುವುದರಿಂದ ಯೂರಿಯಾ ಗೊಬ್ಬರ ಸರಬರಾಜು ಜುಲೈ ತಿಂಗಳಿನಲ್ಲಿ ವ್ಯತ್ಯಾಸವಾಗಿದೆ. ಆದರು ಸುಮಾರು 68,000 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಹೆಚ್ಚುವರಿಯಾಗಿ ಜುಲೈ ಅಂತ್ಯಕ್ಕೆ ಸರಬರಾಜಾಗಿದೆ.
ಆದರೆ ಆಗಸ್ಟ್ ತಿಂಗಳಿನಲ್ಲಿ ಯೂರಿಯಾ ರಸಗೊಬ್ಬರಕ್ಕೆ ಅಂದಾಜು 1,77,000 ಟನ್ ಬೇಡಿಕೆಯಿದ್ದು, ಈಗಾಗಲೇ 49,749 ಟನ್ ಸರಬರಾಜಾಗಿದೆ. 19,305 ಟನ್ ಸರಬರಾಜು ಹಂತದಲ್ಲಿದ್ದು, 1,22,446 ಮೆಟ್ರಿಕ್ ಟನ್ ಸರಬರಾಜಿಗೆ ಸಿದ್ಧತೆ ಮಾಡಲಾಗಿದೆ. ಸರಬರಾಜು ಯೋಜನೆಯಂತೆ ಕೇಂದ್ರ ಸರ್ಕಾರದ ಸಹಕಾರದಿಂದ ಯೂರಿಯಾ ರಸಗೊಬ್ಬರ ಸರಬರಾಜಾಗುವ ನಿರೀಕ್ಷೆಯಿದ್ದು, ಯೂರಿಯಾ ಸರಬರಾಜಿನಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ಕೃಷಿ ಸಚಿವರು ತಿಳಿಸಿದ್ದಾರೆ.

ಕೃಷಿ ಇಲಾಖೆಯ ಅಧಿಕಾರಿಗಳು ರಸಗೊಬ್ಬರಗಳ ಸರಬರಾಜು ಮತ್ತು ರೇಕ್ ಟ್ರ್ಯಾಕಿಂಗ್ ಮೇಲ್ವಿಚಾರಣೆಯನ್ನು ಸಮರ್ಪವಾಗಿ ನಿಭಾಯಿಸುತ್ತಿದ್ದು, 2020 ಜುಲೈ ತಿಂಗಳ ಅಂತ್ಯದವರೆಗೆ 5,63,861 ಮೆಟ್ರಿಕ್ ಟನ್ ರಸಗೊಬ್ಬರ ಕೇಂದ್ರ ಸರ್ಕಾರದಿಂದ ಸರಬರಾಜಾಗಿದೆ. ಅಂತೆಯೇ ಡಿಎಪಿ 2,77,499 ಮೆಟ್ರಿಕ್ ಟನ್, ಕಾಂಪ್ಲೆಕ್ಸ್ ರಸಗೊಬ್ಬರ 5,17,144 ಮೆಟ್ರಿಕ್ ಟನ್ ಸರಬರಾಜಾಗಿದೆ. ಹಾಗೂ ಎಂಒಪಿ ರಸಗೊಬ್ಬರ ಜುಲೈ ಅಂತ್ಯದವರೆಗೆ 1,31,533 ಮೆಟ್ರಿಕ್ ಟನ್ ಸರಬರಾಜಾಗಿದ್ದು, ಒಟ್ಟಾರೆ 14, 90,970 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಆಗಿರುತ್ತದೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ.

ABOUT THE AUTHOR

...view details