ಬೆಂಗಳೂರು: ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯಲ್ಲಿ ನಿನ್ನೆ ಐದು ವರ್ಷದ ಬಾಲಕ ನೀರಿನ ಸಂಪ್ನಲ್ಲಿ ಬಿದ್ದು ಆಕಸ್ಮಿಕವಾಗಿ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಇಲಾಖಾ ತನಿಖೆ ನಡೆಸಿ ಕರ್ತವ್ಯ ಲೋಪ ಕಂಡುಬಂದಲ್ಲಿ ಸಂಬಂಧಪಟ್ಟ ವೈದ್ಯರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಇದರ ಜೊತೆಗೆ ಆ ಸಂದರ್ಭದಲ್ಲಿ ತಡಮಾಡಿ ಕರ್ತವ್ಯ ಲೋಪ ಎಸಗಿರುವ ಅಂಬ್ಯುಲೆನ್ಸ್ ಚಾಲಕನನ್ನು ಕೂಡಲೇ ಕೆಲಸದಿಂದ ವಜಾ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿಯಲ್ಲಿ ಶುಕ್ರವಾರ ಐದು ವರ್ಷದ ಬಾಲಕ ನೀರಿನ ಸಂಪ್ನಲ್ಲಿ ಬಿದ್ದು ಆಕಸ್ಮಿಕವಾಗಿ ಸಾವನ್ನಪ್ಪಿರುವ ಘಟನೆ ನನ್ನ ಮನಸ್ಸಿಗೆ ತೀವ್ರ ಘಾಸಿ ಉಂಟುಮಾಡಿದ್ದು, ಈ ದುರಂತದಿಂದ ವಿಚಲಿತಗೊಂಡಿದ್ದೇನೆ. ನಿನ್ನೆ ಸಂಜೆ ಸುಮಾರು 4:15 ವೇಳೆಗೆ ಮಗು ನೀರಿಗೆ ಬಿದ್ದಿರುವುದನ್ನು ಗಮನಿಸಿದ ಹೆತ್ತವರು ಕಂದಮ್ಮನನ್ನು ಉಳಿಸಿಕೊಳ್ಳುವ ಆಸೆಯಿಂದ ಸುಮಾರು 5 ಗಂಟೆ ವೇಳೆಗೆ ಕೊಡಿಗೇನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ ಎಂದು ತಿಳಿದು ಬಂದಿದೆ.
ಆ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕ ಅಧಿಕಾರಿ ಹಾಗೂ ಹಾಗೂ ಡಿ ಗ್ರೂಪ್ ಸಿಬ್ಬಂದಿಯೊಬ್ಬರು ಲಭ್ಯರಿದ್ದು, ಅಲ್ಲಿನ ವೈದ್ಯರು 4:30ರವರೆಗೆ ಓಪಿಡಿ ಸಮಯ ಮುಗಿಸಿ ಮೈದನಹಳ್ಳಿ ಪ್ರದೇಶಕ್ಕೆ ಕ್ಷೇತ್ರ ಭೇಟಿಗೆ ತೆರಳಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದ ವೈದ್ಯರು ಆಸ್ಪತ್ರೆಗೆ ಬರುವ ಮುಂಚೆಯೇ ಮಗು ಮೃತಪಟ್ಟಿರುವುದಾಗಿ ದೃಢೀಕರಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರವು 24/7 ಸೇವೆ ನೀಡುವ ಆಸ್ಪತ್ರೆಯಾಗಿರುವುದರಿಂದ ಇಬ್ಬರು ವೈದ್ಯರಿದ್ದು, ಪಾಳಿಯಂತೆ ಹೊಂದಾಣಿಕೆ ಮಾಡಿಕೊಂಡು ಯಾವುದೇ ಸಮಯದಲ್ಲಿ ಕನಿಷ್ಠ ಒಬ್ಬ ವೈದ್ಯರಾದರೂ ಕರ್ತವ್ಯದಲ್ಲಿ ಇರಬೇಕಾಗಿರುತ್ತದೆ. ಇದರೊಂದಿಗೆ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿಗಳ ಹಾಜರಾತಿ ಮೇಲೆ ನಿಗಾ ಇಡಲು ಜಿಯೋ ಟ್ಯಾಗಿಂಗ್ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಈ ಕ್ರಮದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊಣೆಗಾರಿಕೆ ಹಾಗೂ ಶಿಸ್ತು ಹೆಚ್ಚಲಿದೆ ಎಂದು ಹೇಳಿದ್ದಾರೆ.
ಕೊಡಿಗೇನಹಳ್ಳಿಯಲ್ಲಿ ನಡೆದ ದುರ್ಘಟನೆಯಲ್ಲಿ ತಮ್ಮ 5 ವರ್ಷದ ಕಂದಮ್ಮನನ್ನು ಕಳೆದುಕೊಂಡ ತಂದೆ-ತಾಯಂದಿರ ಆಕ್ರಂದನ ನನ್ನ ಮನಸ್ಸನ್ನು ಜರ್ಜರಿತಗೊಳಿಸಿದೆ. ಕ್ರೂರ ವಿಧಿಯಾಟ ಆ ಹೆತ್ತವರಿಗೆ ತಂದೊಡ್ಡಿರುವ ನೋವಿನಲ್ಲಿ ನಾನೂ ಭಾಗಿ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ:ತುಮಕೂರಿನಲ್ಲಿ ಬಾಣಂತಿ-ಅವಳಿ ಮಕ್ಕಳು ಸಾವು ಪ್ರಕರಣ: ನಾಲ್ವರು ಸಿಬ್ಬಂದಿ ಅಮಾನತು