ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಇಂದು ಗುರುಗ್ರಾಮ ಮೂಲದ ಆಕ್ಮೆ ( ACME ) ಕ್ಲೀನ್ ಟೆಕ್ ಸೊಲ್ಯುಷನ್ಸ್ ಕಂಪನಿಯು ಮಂಗಳೂರಿನಲ್ಲಿ ಹೈಡ್ರೋಜನ್ ಮತ್ತು ಅಮೋನಿಯಾ ಘಟಕ ಹಾಗೂ ಇದಕ್ಕೆ ಪೂರಕವಾಗಿ ಸೋಲಾರ್ ಘಟಕ ಸ್ಥಾಪನೆಗೆ 52 ಸಾವಿರ ಕೋಟಿ ರೂ. ಹೂಡಿಕೆ ಮಾಡುವ ಬಗ್ಗೆ ರಾಜ್ಯ ಸರ್ಕಾರದೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ.
ರಾಜ್ಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ ಹಾಗೂ ಆಕ್ಮೆ ಗ್ರೂಪ್ ಕಂಪನಿಯ ಸಿಇಓ ಸಂದೀಪ್ ಕಶ್ಯಪ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ. ರಾಜ್ಯ ಸರ್ಕಾರವು ಗ್ರೀನ್ ಹೈಡ್ರೋಜನ್ ನೀತಿಯನ್ನು ರೂಪಿಸುತ್ತಿದ್ದು, ಇದರ ಲಾಭ ಪಡೆದುಕೊಳ್ಳುವಂತೆ ಆಕ್ಮೆ ಗ್ರೂಪ್ ಗೆ ಸಲಹೆ ನೀಡಿದರು.